ADVERTISEMENT

ತಾಪಮಾನ ಏರಿಕೆ ತಡೆಯಲು ಪಶ್ಚಿಮ ಘಟ್ಟ ಉಳಿಯಬೇಕು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 6:57 IST
Last Updated 3 ಫೆಬ್ರುವರಿ 2018, 6:57 IST
ಸಿದ್ದಾಪುರ ತಾಲ್ಲೂಕಿನ ಕೋಡಿಗದ್ದೆ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಮುಕ್ತಿ ಹೊಳೆ ಪಾದಯಾತ್ರೆ(ಚಾರಣ)ಯ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಜೈವಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿದರು. ಡಾ.ಕೇಶವ ಕೂರ್ಸೆ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಅನಂತ ಹೆಗಡೆ ಅಶೀಸರ ಇದ್ದಾರೆ
ಸಿದ್ದಾಪುರ ತಾಲ್ಲೂಕಿನ ಕೋಡಿಗದ್ದೆ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಮುಕ್ತಿ ಹೊಳೆ ಪಾದಯಾತ್ರೆ(ಚಾರಣ)ಯ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಜೈವಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿದರು. ಡಾ.ಕೇಶವ ಕೂರ್ಸೆ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಅನಂತ ಹೆಗಡೆ ಅಶೀಸರ ಇದ್ದಾರೆ   

ಸಿದ್ದಾಪುರ: ‘ಜಾಗತಿಕ ತಾಪಮಾನ ಏರಿಕೆ ಇಂದು ಚರ್ಚೆಯ ಸಂಗತಿಯಾಗಿದೆ. ನಮ್ಮ ಪಶ್ಚಿಮ ಘಟ್ಟ ಜಾಗತಿಕ ತಾಪಮಾನ ಏರಿಕೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಕೇಂದ್ರ ಸರ್ಕಾರದ ಜೈವಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಹೇಳಿದರು.

ಜೌಗು ಭೂಮಿ ದಿನದ ಅಂಗವಾಗಿ ಬೆಂಗಳೂರಿನ ಐಎಫ್ಎಚ್‌ಡಿ ಹಾಗೂ ವೃಕ್ಷ ಲಕ್ಷ ಆಂದೋಲನದ ಆಶ್ರಯದಲ್ಲಿ ತಾಲ್ಲೂಕಿನ ಕೋಡಿಗದ್ದೆಯ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಮುಕ್ತಿ ಹೊಳೆ ಪಾದಯಾತ್ರೆ(ಚಾರಣ) ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಶ್ಚಿಮ ಘಟ್ಟದ ಜೀವ ವೈವಿಧ್ಯ ಬೇರೆ ಕಡೆ ಕಾಣದು. ಹಿಮಾಲಯ ಪರ್ವತ ಶ್ರೇಣಿಗಳು 200 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿವೆ. ಆದರೆ ಪಶ್ಚಿಮ ಘಟ್ಟ ರೂಪುಗೊಂಡು 350 ಕೋಟಿ ವರ್ಷಗಳಾಗಿವೆ. ಇಡೀ ಪ್ರಪಂಚದ ಸಮತೋಲನವನ್ನು ಈ ಪಶ್ಚಿಮ ಘಟ್ಟಗಳು ಕಾಯುವುದವರಿಂದ
ನಮ್ಮ ಜವಾಬ್ದಾರಿ ದೊಡ್ಡದಿದೆ’ ಎಂದರು.

ADVERTISEMENT

ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ ರಾಂ ಪತ್ರೆ ಜಡ್ಡಿಗಳ ರಕ್ಷಣೆ ಆಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿಗಳು ಒತ್ತಡ ಜಾಸ್ತಿ ಮಾಡಬೇಕು’ ಎಂದರು.

‘ಅಘನಾಶಿನಿ ನದಿ ತಿರುವು ಯೋಜನೆ ಸರ್ಕಾರದ ಮಧ್ಯೆ ಇದೆ. ಅದು ಯಾವಾಗಲಾದರೂ ಜೀವ ಬರಬಹುದು. ಇಲ್ಲಿ ನಮಗೇ ನೀರಿಲ್ಲ. ಹೀಗಿರುವಾಗ ಅಲ್ಲಿಗೆ ನೀರು ಒಯ್ಯುವುದು ಹೇಗೆ ?’ ಎಂದು ಪ್ರಶ್ನೆ ಮಾಡಿದ ಅವರು, ‘ಈ ಯೋಜನೆಯೊಂದಿಗೆ ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಯನ್ನೂ ನಾವು ವಿರೋಧ ಮಾಡುತ್ತಿದ್ದೇವೆ’ ಎಂದರು.

ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ಸಂಚಾಲಕ ಪ್ರೊ.ಬಿ.ಎಂ.ಕುಮಾರಸ್ವಾಮಿ, ಔಷಧಿ ಸಸ್ಯ ಪ್ರಾಧಿಕಾರದ ಸದಸ್ಯ ಡಾ.ಕೇಶವ ಕೂರ್ಸೆ, ತಾಲ್ಲೂಕು ಪಂಚಾಯ್ತಿ ಸದಸ್ಯ ವಿವೇಕ ಭಟ್ಟ, ದೊಡ್ಮನೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಹರನಗಿರಿ, ಕ್ಯಾದಗಿ ಆರ್ಎಫ್ಒ ಪ್ರಭಾಕರ ಕಾಗಿನೆಲ್ಲಿ ಇದ್ದರು.

* * 

ಪಾದಯಾತ್ರೆ ಮೂಲಕ ಆಗ್ರಹ
ಸಿಂಗಳಿಕ ಸೇರಿದಂತೆ ಅಘನಾಶಿನಿ–ಶರಾವತಿ ಕಣಿವೆಯ ಜೀವ, ಸಸ್ಯ ವೈವಿಧ್ಯದ ಸಂರಕ್ಷಣೆಗೆ ಅರಣ್ಯ ಇಲಾಖೆ ಆದ್ಯತೆ ನೀಡಬೇಕು. ಅಘನಾಶಿನಿ, ಬೇಡ್ತಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಗೆ ಸಮಿತಿ ರಚಿಸಬೇಕು. ಪಶ್ಚಿಮ ಘಟ್ಟದ ಜೌಗು ಪ್ರದೇಶಗಳ ಅತಿಕ್ರಮಣ ತಡೆಯಬೇಕು.

ಅರಣ್ಯ ನಾಶದ ಬೃಹತ್ ಯೋಜನೆಗಳನ್ನು ಸರ್ಕಾರ ಕೈಗೊಳ್ಳಬಾರದು. ಕರಾವಳಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ನಾಶವಾದ ಸಣ್ಣ ಹಳ್ಳ,ಅಳಿವೆ,ಜಲಮೂಲಗಳನ್ನು ಸರಿಪಡಿಸಬೇಕು. ರಾಂ ಪತ್ರ ಜಡ್ಡಿಯನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ಅಕ್ರಮ ಮರಳು ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಈ ಪಾದಯಾತ್ರೆ(ಚಾರಣ)ಯ ಮೂಲಕ ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.