ADVERTISEMENT

‘ಮೊದಲ ಹಂತದಲ್ಲಿ 59 ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:12 IST
Last Updated 20 ಆಗಸ್ಟ್ 2019, 13:12 IST

ಕಾರವಾರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನುಸ್ಥಾಪಿಸಲು ಜಿಲ್ಲಾ ಪಂಚಾಯ್ತಿ ಮುಂದಡಿಯಿಟ್ಟಿದೆ. ಇದರ ಮೊದಲ ಹಂತದಲ್ಲಿ 59 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ತಲಾ ₹ 20 ಲಕ್ಷ ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. 14ನೇ ಹಣಕಾಸು ಯೋಜನೆಯಡಿ ಕೂಡ ಇದಕ್ಕೆ ಹಣಕಾಸು ಹೊಂದಿಸಿಕೊಳ್ಳಬಹುದು. ಒಟ್ಟು ಮೂರು ತಿಂಗಳಲ್ಲಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ’ ಎಂದರು.

‘ಮೊದಲ ತಿಂಗಳಲ್ಲಿ ಗ್ರಾಮಗಳಲ್ಲಿ ಸಮೀಕ್ಷೆ ಮಾಡಿ, ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಎರಡನೇ ತಿಂಗಳಲ್ಲಿ, ಉತ್ತಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬೇರೆ ಜಿಲ್ಲೆಗಳಿಗೆ ಗ್ರಾಮ ಪಂಚಾಯ್ತಿ ಹಾಗೂಜಿಲ್ಲಾ ಪಂಚಾಯ್ತಿಜನಪ್ರತಿನಿಧಿಗಳನ್ನು ಅಧ್ಯಯನ ಪ್ರವಾಸ ಕರೆದುಕೊಂಡು ಹೋಗಲಾಗುತ್ತದೆ. ಮೂರನೇ ಹಂತದಲ್ಲಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬಳಿಕ, ₹ 20 ಲಕ್ಷ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕೇವಲ ಐದು ಗುಂಟೆ ಜಾಗವಿದ್ದರೂ ಘಟಕಗಳನ್ನು ಸ್ಥಾಪಿಸಬಹುದು. ಎಲ್ಲೂ ಜಾಗದ ಕೊರತೆಯಿಲ್ಲ. ಈಗಾಗಲೇ ಆರು ಕಡೆಗಳಲ್ಲಿ ಇಂತಹ ಘಟಕಗಳನ್ನು ಆರಂಭಿಸಲಾಗಿದೆ. ಗೋಕರ್ಣದಲ್ಲಿ ಒಣ ಮತ್ತು ಹಸಿ ಕಸದ ನಿರ್ವಹಣೆಗೆ ಪ್ರತ್ಯೇಕ ಘಟಕಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ 500 ಮನೆಗಳನ್ನು ಈ ಯೋಜನೆಯಡಿ ತರಲಾಗುವುದು. ನನಗೆ ಇನ್ನಷ್ಟು ಕಾಲಾವಕಾಶ ಸಿಕ್ಕಿದರೆ ಜಿಲ್ಲೆಯ ಎಲ್ಲ 231ಗ್ರಾಮಗಳಲ್ಲೂತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.ಆಗ ನಮ್ಮ ಜಿಲ್ಲೆಯು ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿ ಇರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.