ಕಾರವಾರ: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸುಗಮ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸುವ ಸಲುವಾಗಿ ಒಟ್ಟು 7,632 ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
‘ಚುನಾವಣೆ ಕರ್ತವ್ಯ ನಿರ್ವಹಿಸಲು 1,435 ಮತಗಟ್ಟೆ ಸಿಬ್ಬಂದಿ, ತಲಾ 1,908 ಪ್ರಿಸೈಡಿಂಗ್ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು, 3,816 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಕೆಲಸಕ್ಕೆ ನೇಮಕಗೊಂಡವರಿಗೆ ಈಗಾಗಲೆ ನೋಟಿಸ್ ಮೂಲಕ ಮಾಹಿತಿ ನೀಡಲಾಗಿದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಂಕೋಲಾ ತಾಲೂಕಿನಲ್ಲಿ 638, ಭಟ್ಕಳ 595, ಹಳಿಯಾಳ 645, ಹೊನ್ನಾವರ 882, ಕಾರವಾರ 864, ಕುಮಟಾ 840, ಮುಂಡಗೋಡ 516, ಸಿದ್ದಾಪುರ 646, ಶಿರಸಿ 1113, ಜೋಯಿಡಾ 289, ಯಲ್ಲಾಪುರ 503 ಮತ್ತು ದಾಂಡೇಲಿಯಲ್ಲಿ 101 ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 7,632 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರ‍್ಯಾಂಡಮೈಸೇಷನ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.
‘ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ ಸಿಬ್ಬಂದಿಗೆ ಆಯಾ ತಾಲ್ಲೂಕುಗಳಲ್ಲಿ ಏ. 16 ರಂದು ಮೊದಲ ಹಂತದ ತರಬೇತಿ ಆಯೋಜಿಸಲಾಗಿದ್ದು, ತರಬೇತಿ ಸಮಯದಲ್ಲಿ ಸಿಬ್ಬಂದಿಗೆ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಬಳಕೆ ಸೇರಿದಂತೆ ಸುಗಮ ಚುನಾವಣಾ ಕರ್ತವ್ಯಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಮಗ್ರ ತರಬೇತಿಯ ಜತೆಗೆ ಅಂಚೆ ಮತದಾನ ಮಾಡಲು ಅಗತ್ಯವಿರುವ ಅರ್ಜಿಗಳ ವಿತರಣೆ ಕೂಡ ಮಾಡಲಾಗುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.