ADVERTISEMENT

ಅಂಗವಿಕಲರಿಂದ ಶೇ 97ರಷ್ಟು ಮತ ಚಲಾವಣೆ

ವ್ಯರ್ಥವಾಗದ ‌ಜಿಲ್ಲಾಡಳಿತದ ಶ್ರಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 14:18 IST
Last Updated 23 ಏಪ್ರಿಲ್ 2019, 14:18 IST
ಕಾರವಾರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಅಂಗವಿಕಲ ವೃದ್ಧರೊಬ್ಬರನ್ನು ಸಿಬ್ಬಂದಿ ಗಾಲಿ ಕುರ್ಚಿಯಲ್ಲಿ ಹೊರಗೆ ಕರೆದುಕೊಂಡು ಬರುತ್ತಿರುವುದು
ಕಾರವಾರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಅಂಗವಿಕಲ ವೃದ್ಧರೊಬ್ಬರನ್ನು ಸಿಬ್ಬಂದಿ ಗಾಲಿ ಕುರ್ಚಿಯಲ್ಲಿ ಹೊರಗೆ ಕರೆದುಕೊಂಡು ಬರುತ್ತಿರುವುದು   

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿದ್ದ 13,457 ಅಂಗವಿಕಲ ಮತದಾರರಲ್ಲಿ 13,009 ಮಂದಿ ಮತದಾನದ ದಿನವಾದ ಮಂಗಳವಾರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರಿಂದ ಶೇ 97ರಷ್ಟು ಮತದಾನವಾಗಿದೆ.

ಚುನಾವಣೆಗಳಲ್ಲಿ ಅಂಗವಿಕಲರು ಕೆಲವು ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದರು. ಆದರೆ, ಇದನ್ನು ಮನಗಂಡ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ಅಂಗವಿಕಲ ಸ್ನೇಹಿಯನ್ನಾಗಿ ಪರಿವರ್ತಿಸಿತ್ತು. ಜತೆಗೆ, ಅವರನ್ನು ಸೆಳೆಯಲು ಚುನಾವಣೆಗೂ ಪೂರ್ವ ಜಾಗೃತಿ ಜಾಥಾ, ರ್ಯಾಲಿ ಹಾಗೂ ಆಯ್ದ ಕೆಲವರಿಗೆ ಪ್ಯಾರಾಗ್ಲೈಡಿಂಗ್‌ಗೆ ಅವಕಾಶ ಮಾಡಿಕೊಡಲಾಗಿತ್ತು.

ಎಲ್ಲ ಮತಗಟ್ಟೆಗಳಲ್ಲಿಯೂ ರ್‍ಯಾಂಪ್‌ಗಳನ್ನು ಅಳವಡಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಲ್ಲದೇ ಎಲ್ಲರೂ ಸರಾಗವಾಗಿ ಮತ ಚಲಾವಣೆ ಮಾಡಿದರು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಜಿಲ್ಲೆಯಾದ್ಯಂತ 1,437 ಗಾಲಿ ಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ADVERTISEMENT

ಜಿಲ್ಲೆಯ ಅಂಕೋಲಾ ಹಾಗೂ ಯಲ್ಲಾಪುರದಲ್ಲಿ ಒಟ್ಟು ಎರಡು ಅಂಗವಿಕಲ ಸ್ನೇಹಿ ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಮತಗಟ್ಟೆಗಳ ಗೋಡೆಗಳಿಗೆ ನೀಲಿ ಬಣ್ಣ ಬಳಿಯಲಾಗಿತ್ತು. ಬಲೂನ್‌ಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಅಂಗವಿಕಲ ಸಿಬ್ಬಂದಿಯನ್ನೇ ಇಲ್ಲಿ ಮತಗಟ್ಟೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.