ಅಂಕೋಲಾ: ಅಂಕೋಲಾ ಬಂಡಿಹಬ್ಬವು ಸೋಮವಾರ ಸಂಜೆ ಸಹಸ್ರಾರು ಭಕ್ತರ ಹರ್ಷೊದ್ಘಾರದ ನಡುವೆ ಸಂಭ್ರಮದಿಂದ ಜರುಗಿತು.
ಅಕ್ಷಯ ತೃತೀಯ ದಿನದಿಂದ ಆರಂಭವಾದ ಬಂಡಿಹಬ್ಬವು ಪೌರ್ಣಿಮೆಯ ದಿನದಂದು ರಾಟೆ ಕಂಬವನ್ನೇರುವ ಸಂಪ್ರದಾಯದ ಮೂಲಕ ಯಶಸ್ವಿಯಾಗಿ ಪೂರ್ಣವಾಯಿತು. ಸೋಮವಾರ ಕುಂಬಾರಕೇರಿ ಮೂಲ ಕಳಸ ದೇವಸ್ಥಾನದಿಂದ ಚಿನ್ನಾಭರಣ ಭೂಷಿತ, ಪುಷ್ಪಾಲಂಕೃತ ಕಳಸವನ್ನು ನಗರದಲ್ಲಿ ಸಂಚರಿಸಿ ಆಡೊಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು.
ಕಳಸದ ಜೊತೆಯಲ್ಲಿ ಬಿಡಿ ಗುನಗ, ಕಟಗಿದಾರರು ಸೇರಿದಂತೆ ಪಂಚವಾದ್ಯಗಳು ಮೊಳಗಿದವು. ದೇವಿಗೆ ಪ್ರಿಯವಾದ ಮಲ್ಲಿಗೆ, ಅಬ್ಬಲಿ, ಸಂಪಿಗೆ ಹೂವನ್ನು ಭಕ್ತರು ಸಮರ್ಪಿಸಿದರು. ಕಳಸವನ್ನು ಸ್ವಾಗತಿಸಲು ನಗರದ ತುಂಬೆಲ್ಲ ರಂಗೋಲಿ ಹಾಕಿ ತಳಿರು, ತೋರಣಗಳಿಂದ ಸಿಂಗರಿಸಿದ್ದರು.
ಆಡುಕಟ್ಟೆಯಲ್ಲಿ ದೇವಿಗೆ ಬಲಿದೇವರ ಮಕ್ಕಳ ಆವಾಹನೆ ಪಡೆದು ದೇವಿಯ ಕಳಸವು ಶಾಂತಾದುರ್ಗಾ ದೇವಸ್ಥಾನದ ನೇರದಲ್ಲಿರುವ ಬಂಡಿಕಟ್ಟೆಯಲ್ಲಿ ರಾಟೆಕಂಬವನ್ನೇರಿತು.
ನಗರದಲ್ಲಿ ಹಬ್ಬದ ಸಂಭ್ರಮವನ್ನು ವೀಕ್ಷಿಸಲು ಆಗಮಿಸಿದ ಸಹಸ್ರಾರು ಭಕ್ತ ಸಮೂಹ ಚಪ್ಪಾಳೆ ಹೊಡೆದು ಸಂಭ್ರಮಿಸಿತು. ಹೊರರಾಜ್ಯದಲ್ಲಿ ನೆಲೆಸಿರುವ ಅಂಕೋಲಾದ ನಿವಾಸಿಗಳು ಊರಿಗೆ ಆಗಮಿಸಿ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.