ADVERTISEMENT

ಮನೆಗೆ ಮರಳಿದ ಕಾರವಾರದ ಯುವಕ

‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿದ್ದ ಅಭಿಷೇಕ ಮಗರ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:07 IST
Last Updated 14 ಮಾರ್ಚ್ 2020, 13:07 IST
ಕಾರವಾರದ ತಮ್ಮ ಮನೆಗೆ ಮರಳಿದ ಅಭಿಷೇಕ ಮಗರ್. ತಂದೆ ಬಾಲಕೃಷ್ಣ ಮಗರ್ ಜೊತೆಗಿದ್ದಾರೆ.
ಕಾರವಾರದ ತಮ್ಮ ಮನೆಗೆ ಮರಳಿದ ಅಭಿಷೇಕ ಮಗರ್. ತಂದೆ ಬಾಲಕೃಷ್ಣ ಮಗರ್ ಜೊತೆಗಿದ್ದಾರೆ.   

ಕಾರವಾರ: ‘ಡೈಮಂಡ್ ಪ್ರಿನ್ಸೆಸ್’ ಕ್ರೂಸ್‌ನಲ್ಲಿ ಜಪಾನ್‌ನಲ್ಲಿ ಸಿಲುಕಿದ್ದ ಕಾರವಾರದ ಯುವಕ ಅಭಿಷೇಕ ಮಗರ್, ನಗರದ ನಂದನಗದ್ದಾದ ತಮ್ಮ ಮನೆಗೆ ಶುಕ್ರವಾರ ರಾತ್ರಿ ಸುರಕ್ಷಿತವಾಗಿಮರಳಿದ್ದಾರೆ. ಹೀಗಾಗಿ ಅವರ ಪಾಲಕರ ಸಂಭ್ರಮ ಮುಗಿಲುಮುಟ್ಟಿದೆ.

ಅವರೊಂದಿಗಿದ್ದಜಿಲ್ಲೆಯ ಹಳಗಾ ಮತ್ತು ಶಿರಸಿಯ ಯುವಕರೂ ವಾಪಸಾಗಿದ್ದಾರೆ. ಬರ್ಮುಡಾ ದೇಶದ ಪ್ರಯಾಣಿಕರ ದೊಡ್ಡ ಹಡಗಿನಲ್ಲಿಉದ್ಯೋಗಿಯಾಗಿರುವ ಅವರು, ಹಾಂಗ್‌ಕಾಂಗ್‌ನಿಂದ ಜಪಾನ್‌ನ ಟೋಕಿಯೋಗೆ ಪ್ರಯಾಣಿಸುತ್ತಿದ್ದರು. ಅದರಲ್ಲಿ ಕೋವಿಡ್ 19ಸೋಂಕು ಪೀಡಿತರು ಇದ್ದ ಕಾರಣ, ಜಪಾನ್ ಅಧಿಕಾರಿಗಳು ತಮ್ಮ ದೇಶದ ಕಡಲತೀರವನ್ನು ಪ್ರವೇಶಿಸದಂತೆ ತಡೆದಿದ್ದರು.

2,600ಕ್ಕೂ ಅಧಿಕ ಪ್ರವಾಸಿಗರಿದ್ದ ಹಡಗು ಫೆ.5ರಿಂದ19ರವರೆಗೆ ಸಮುದ್ರದಲ್ಲೇ ಬಾಕಿಯಾಗಿತ್ತು. ಇದೇವೇಳೆ, ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದುದು ಅಭಿಷೇಕ ಪಾಲಕರ ಆತಂಕಕ್ಕೆ ಕಾರಣವಾಗಿತ್ತು. ಅವರ ತಂದೆ ಬಾಲಕೃಷ್ಣ ಮಗರ್, ಪುತ್ರನನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಸಹಕರಿಸುವಂತೆ ಜಿಲ್ಲಾಡಳಿತದ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ADVERTISEMENT

‘ಫೆ.26ಕ್ಕೆ ವಿಶೇಷ ವಿಮಾನವು ಟೊಕಿಯೋಕ್ಕೆ ತೆರಳಿ ಹಡಗಿನಲ್ಲಿದ್ದ ಎಲ್ಲ ಭಾರತೀಯರನ್ನು ಕರೆದುಕೊಂಡು ಫೆ.27ರಂದು ದೆಹಲಿಗೆ ತಲುಪಿತ್ತು. ಅಲ್ಲಿಂದ ಹರಿಯಾಣದಲ್ಲಿ 14 ದಿನ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿತ್ತು. ಒಂದು ದಿನ ವೈದ್ಯಕೀಯ ತಪಾಸಣೆ ನಡೆಸಿ ವೈರಾಣು ಸೋಂಕು ಇಲ್ಲವೆಂದು ದೃಢಪಟ್ಟ ಬಳಿಕ ಪ್ರಮಾಣ ಪತ್ರ ನೀಡಿ ಕಳುಹಿಸಿಕೊಟ್ಟಿದ್ದಾರೆ’ ಎಂದು ಅಭಿಷೇಕ ಹೇಳಿದರು.

‘ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲೇ ಕಾರವಾರ ತಾಲ್ಲೂಕಿನ ಹಳಗಾದ ನಿಹಾಲ್ ಮತ್ತು ಶಿರಸಿಯ ಜಾಸ್ಮಿನ್ ಕೂಡ ಕೆಲಸ ಮಾಡುತ್ತಿದ್ದರು. ಅವರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದ್ದು,ಇಬ್ಬರೂ ಸುರಕ್ಷಿತವಾಗಿದ್ದಾರೆ. ಅವರೂ ಈಗ ತಮ್ಮ ಮನೆಗಳಿಗೆ ಮರಳಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪುತ್ರ ಕ್ಷೇಮವಾಗಿ ಮನೆಗೆ ಮರಳಿದ್ದು ತುಂಬ ಸಂತಸವಾಗಿದೆ. ಜಿಲ್ಲಾಡಳಿತ ಮತ್ತು ಕೇಂದ್ರ ಸರ್ಕಾರ ಸೂಕ್ತ ಸಮಯಕ್ಕೆ ಸಹಕಾರ ನೀಡಿದ್ದರಿಂದ ನಮ್ಮ ಆತಂಕ ದೂರವಾಯಿತು’ ಎಂದು ತಂದೆ ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.