ADVERTISEMENT

ಕಾರವಾರ | ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪರೀಕ್ಷೆ: ಗೈರಾದವರೇ ಅಧಿಕ

ಕೇಂದ್ರಗಳಿಗೆ ಪೊಲೀಸ್ ಬಿಗಿ ಕಾವಲು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 13:52 IST
Last Updated 27 ಆಗಸ್ಟ್ 2024, 13:52 IST
ಕಾರವಾರದ ಹಿಂದೂ ಪ್ರೌಢಶಾಲೆ ಪರೀಕ್ಷೆ ಕೇಂದ್ರದ ಹೊರಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಕ್ಕೆ ಬಿಡಲಾಯಿತು
ಕಾರವಾರದ ಹಿಂದೂ ಪ್ರೌಢಶಾಲೆ ಪರೀಕ್ಷೆ ಕೇಂದ್ರದ ಹೊರಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಕ್ಕೆ ಬಿಡಲಾಯಿತು   

ಕಾರವಾರ: ಕರ್ನಾಟಕ ಲೋಕಸೇವಾ ಆಯೋಗವು ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಮಂಗಳವಾರ ನಡೆಸಿದ ಲಿಖಿತ ಪರೀಕ್ಷೆಗೆ ಹಾಜರಿದ್ದ ಅಭ್ಯರ್ಥಿಗಳಿಗಿಂತ, ಗೈರಾದವರ ಸಂಖ್ಯೆ ಹೆಚ್ಚಿತ್ತು.

ತಾಲ್ಲೂಕಿನ 15 ಕೇಂದ್ರಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ಸುಗಮವಾಗಿ ನಡೆದವು. ಮೊದಲ ಅವಧಿಯಲ್ಲಿ ಸಾಮಾನ್ಯ ಜ್ಞಾನ ಹಾಗೂ ಎರಡನೇ ಅವಧಿಯಲ್ಲಿ ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದ 4,316 ಅಭ್ಯರ್ಥಿಗಳ ಪೈಕಿ 2,017 ಮಂದಿ ಸಾಮಾನ್ಯ ಜ್ಞಾನ ಮತ್ತು 2,015 ಮಂದಿ ನಿರ್ದಿಷ್ಟ ಪತ್ರಿಕೆ ಪರೀಕ್ಷೆ ಬರೆದರು.

ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಪೊಲೀಸ್ ಕಾವಲು ಹಾಕಲಾಗಿತ್ತು. ಪರೀಕ್ಷೆ ಆರಂಭಕ್ಕೆ ಎರಡು ತಾಸು ಮುನ್ನವೇ ಅಭ್ಯರ್ಥಿಗಳು ಕೇಂದ್ರಗಳಿಗೆ ಹಾಜರಾಗಲು ಸೂಚಿಸಲಾಗಿತ್ತು. ಬಿಗು ತಪಾಸಣೆ ನಡೆಸಿದ ಬಳಿಕವೇ ಕೇಂದ್ರದ ಒಳಗೆ ಪ್ರವೇಶ ನೀಡಲಾಯಿತು. ಎಲೆಕ್ಟ್ರಾನಿಕ್ಸ್ ಉಪಕರಣ, ಆಭರಣಗಳನ್ನು ನಿಷೇಧಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಪರೀಕ್ಷೆ ಮುಂದೂಡುವಂತೆ ರಾಜ್ಯದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಯ ಕಾರಣಕ್ಕೆ ಪರೀಕ್ಷೆ ಮುಂದೂಡಿಕೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಇದಲ್ಲದೆ ಕೊನೆ ಕ್ಷಣದಲ್ಲಿ ಪರೀಕ್ಷೆ ಕೇಂದ್ರ ನಿಗದಿಯಾಗಿದ್ದರಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ನನ್ನ ಆರು ಮಂದಿ ಸ್ನೇಹಿತರು ಕೊನೆ ಕ್ಷಣದಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿದರು’ ಎಂದು ಹಾವೇರಿಯಿಂದ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಯೊಬ್ಬರು ತಿಳಿಸಿದರು.

ಪರೀಕ್ಷೆ ಬರೆಯುವ ಸಲುವಾಗಿ ಜಿಲ್ಲೆಯ ವಿವಿಧೆಡೆಯಿಂದ, ಹೊರ ಜಿಲ್ಲೆಗಳಿಂದ ಮುನ್ನಾ ದಿನವೇ ಅಭ್ಯರ್ಥಿಗಳು ಹಾಗೂ ಅವರೊಂದಿಗೆ ಅವರ ಸಂಬಂಧಿಕರು ನಗರಕ್ಕೆ ಬಂದು ತಂಗಿದ್ದರು. ಹೀಗಾಗಿ ಇಲ್ಲಿನ ಅತಿಥಿಗೃಹ, ಹೊಟೆಲ್‍ಗಳ ಕೊಠಡಿಗಳು ಭರ್ತಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.