ADVERTISEMENT

ಕೋವಿಡ್‌ ಮುಂಜಾಗ್ರತೆಗೆ ಸೂಚನೆ, ಟಿಬೆಟನ್‌ ಕ್ಯಾಂಪ್‌ಗೆ ಎಸಿ ರಾಹುಲ್‌ ಪಾಂಡೆ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 7:03 IST
Last Updated 1 ಡಿಸೆಂಬರ್ 2021, 7:03 IST
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ಗೆ ಕುಮಟಾ ಉಪವಿಭಾಗಾಧಿಕಾರಿ ರಾಹುಲ್‌ ಪಾಂಡೆ ಭೇಟಿ ನೀಡಿ ಟಿಬೆಟನ್‌ ಮುಖಂಡರು ಹಾಗೂ ವೈದ್ಯರೊಂದಿಗೆ ಚರ್ಚಿಸಿದರು
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ಗೆ ಕುಮಟಾ ಉಪವಿಭಾಗಾಧಿಕಾರಿ ರಾಹುಲ್‌ ಪಾಂಡೆ ಭೇಟಿ ನೀಡಿ ಟಿಬೆಟನ್‌ ಮುಖಂಡರು ಹಾಗೂ ವೈದ್ಯರೊಂದಿಗೆ ಚರ್ಚಿಸಿದರು   

ಮುಂಡಗೋಡ: ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ಗೆ ಕುಮಟಾ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಸೋಮವಾರ ಭೇಟಿ ನೀಡಿ, ಅಲ್ಲಿನ ಟಿಬೆಟನ್ ಮುಖಂಡರು ಹಾಗೂ ವೈದ್ಯರೊಂದಿಗೆ ಚರ್ಚಿಸಿದರು.

ಕೋವಿಡ್ ಪ್ರಕರಣಗಳು ವಿದೇಶಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಟಿಬೆಟನ್‌ರು ವಿದೇಶಗಳಿಗೆ ಹೋಗಿ ಬರುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತು.

ಕೆಲ ತಿಂಗಳ ಹಿಂದೆ ಕಾಲೊನಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಾಗ ಕೈಗೊಂಡಿದ್ದ ಕ್ರಮಗಳ ಬಗ್ಗೆ ಡೊಗುಲಿಂಗ್ ಸೆಟ್ಲ್‌ಮೆಂಟ್ ಕಚೇರಿಯ ಚೇರಮನ್ ಲಾಖ್ಪಾ ಸಿರಿಂಗ್ ಅಧಿಕಾರಿಗಳಿಗೆ ವಿವರಿಸಿದರು.

ADVERTISEMENT

‘ಕೋವಿಡ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ಸಕಾ೯ರದ ಮಾಗ೯ಸೂಚಿಯಂತೆ ನಿಯಮ ಪಾಲನೆ ಅಗತ್ಯ. ವಿದೇಶಗಳಿಂದ ಬರುವ ಪ್ರತಿಯೊಬ್ಬ ಟಿಬೆಟನ್ ಹಾಗೂ ಇತರ ವಿದೇಶಿಗರ ಮಾಹಿತಿಯನ್ನು ತಾಲ್ಲೂಕು ಆಡಳಿತಕ್ಕೆ ನೀಡಬೇಕು. ಕೋವಿಡ್‌ ಸಂಬಂಧಿತ ವಿಷಯಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕುʼ ಎಂದು ರಾಹುಲ್ ಪಾಂಡೆ ಸೂಚಿಸಿದರು.

ಕೋವಿಡ್‌ ಪರೀಕ್ಷೆ: ಮಂಗಳವಾರದಿಂದ ಪಟ್ಟಣದ ವ್ಯಾಪಾರಸ್ಥರು, ಆಟೊ ಚಾಲಕರು, ಬ್ಯಾಂಕ್‌ ಉದ್ಯೋಗಿಗಳು ಸೇರಿದಂತೆ ಇತರ ಗುಂಪಿನ ಜನರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ತಾಲ್ಲೂಕಿನಲ್ಲಿ ಒಂದು ಮಾತ್ರ ಕೋವಿಡ್‌ ಸಕ್ರಿಯ ಪ್ರಕರಣವಿದ್ದು, ಟಿಬೆಟನ್‌ ಕ್ಯಾಂಪ್‌ನಲ್ಲಿ ಸೋಂಕಿತರ ಸಂಖ್ಯೆ ಶೂನ್ಯ ಇದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್‌ ಪರೀಕ್ಷೆ ಮಾಡಿಸುವುದು ಹಾಗೂ ಹೊಸ ರೂಪಾಂತರ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಹಶೀಲ್ದಾರ್‌ ಶ್ರೀಧರ ಮುಂದಲಮನಿ ಹೇಳಿದರು.

ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಎಚ್.ಎಫ್.ಇಂಗಳೆ, ಡಿಟಿಆರ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನವಾಂಗ್ ತುಪ್ಟೇನ್ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.