ADVERTISEMENT

ರೈತನ ಕೈ ಹಿಡಿದ ಸಿರಿಧಾನ್ಯ, ಹಸಿರು ತರಕಾರಿ

ವರ್ಷಾವಧಿ ಬೇಸಾಯದಲ್ಲಿ ತೊಡಗಿಕೊಳ್ಳುವ ಬಾಳೆಗುಳಿಯ ವೆಂಕಟರಮಣ ಗೌಡ

ಗಣಪತಿ ಹೆಗಡೆ
Published 17 ಜನವರಿ 2025, 5:43 IST
Last Updated 17 ಜನವರಿ 2025, 5:43 IST
ಅಂಕೋಲಾ ತಾಲ್ಲೂಕು ಬಾಳೆಗುಳಿಯಲ್ಲಿರುವ ತಮ್ಮ ಗದ್ದೆಯಲ್ಲಿ ಬೆಳೆದ ರಾಗಿಯ ಫಸಲಿನೊಂದಿಗೆ ರೈತ ವೆಂಕರಮಣ ಗೌಡ
ಅಂಕೋಲಾ ತಾಲ್ಲೂಕು ಬಾಳೆಗುಳಿಯಲ್ಲಿರುವ ತಮ್ಮ ಗದ್ದೆಯಲ್ಲಿ ಬೆಳೆದ ರಾಗಿಯ ಫಸಲಿನೊಂದಿಗೆ ರೈತ ವೆಂಕರಮಣ ಗೌಡ   

ಕಾರವಾರ: ಕರಾವಳಿ ಭಾಗದಲ್ಲಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವ ಸಮಸ್ಯೆ, ನೀರಿನ ಕೊರತೆ...ಹೀಗೆ ಒಂದಲ್ಲ ಒಂದು ಕಾರಣದಿಂದ ಕೃಷಿ ಭೂಮಿ ಪಾಳು ಬೀಳುತ್ತಿರುವುದು ಹೆಚ್ಚಿದೆ. ಇಂಥ ಸಮಸ್ಯೆಯ ನಡುವೆಯೂ ವರ್ಷದುದ್ದಕ್ಕೂ ಗದ್ದೆಯನ್ನು ಖಾಲಿ ಬಿಡದೆ ಕೃಷಿಯಲ್ಲಿ ತೊಗಿಡಿಸಿಕೊಂಡ ರೈತರೊಬ್ಬರು ಹೊಸ ಭರವಸೆ ಹುಟ್ಟಿಸಿದ್ದಾರೆ.

ಅಂಕೋಲಾ ತಾಲ್ಲೂಕು ಬಾಳೆಗುಳಿಯ ವೆಂಕಟರಮಣ ಬೆಚ್ಚು ಗೌಡ ತಮಗೆ ಸೇರಿದ ಸುಮಾರು ಒಂದೂವರೆ ಎಕರೆ ಹೊಲದಲ್ಲಿ ಬಹುಬೆಳೆಯ ಮೂಲಕ ಸಮಾಧಾನಕರ ಆದಾಯ ಗಳಿಸುತ್ತ, ಇತರ ಕೃಷಿಕರಿಗೆ ಮಾದರಿ ಆಗುತ್ತಿದ್ದಾರೆ. ಸಣ್ಣ ಹಿಡುವಳಿದಾರರಾದರೂ ಬಹುವಿಧದ ಬೆಳೆ ಬೆಳೆಯುವುದು ಅವರ ವಿಶೇಷ.

ಮಳೆಗಾಲದಲ್ಲಿ ಭತ್ತ, ಹಿಂಗಾರು ಅವಧಿಯಲ್ಲಿ ಸಿರಿಧಾನ್ಯ, ತರಕಾರಿಗಳನ್ನು ಬೆಳೆಯುವ ಜೊತೆಗೆ ಕುರಿ ಸಾಕಣೆ, ಪಶುಪಾಲನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಸದ್ಯ ಅವರಿಗೆ ಸೇರಿರುವ ಗದ್ದೆಯಲ್ಲಿ ಬಿಳಿ ಎಳ್ಳು, ಹಸಿರು ತರಕಾರಿಗಳು, ಶೇಂಗಾ ಸೋಂಪಾಗಿ ಬೆಳೆಯುತ್ತಿವೆ. ಕೆಲವೇ ವಾರದ ಹಿಂದಷ್ಟೆ ಅವರು ರಾಗಿ ಬೆಳೆ ಕೊಯ್ಲು ಮಾಡಿ ಉತ್ತಮ ಫಸಲು ಗಳಿಸಿಕೊಂಡಿದ್ದಾರೆ.

ADVERTISEMENT

‘ಕೃಷಿ ಕುಟುಂಬದ ಮೂಲ ಕಸುಬು. ಸಣ್ಣ ಜಮೀನಾದರೂ ಹಲವು ಬಗೆಯ ಬೆಳೆ ತೆಗೆಯಬೇಕು ಎಂಬುದು ಬಾಲ್ಯದಿಂದಲೂ ಇದ್ದ ಕನಸು. ಅದನ್ನು ಹಲವು ವರ್ಷಗಳಿಂದ ಕೈಗೂಡಿಸಿಕೊಂಡು ಬಂದಿದ್ದೇನೆ. ಮುಂಗಾರು ಅವಧಿಯಲ್ಲಿ ಗದ್ದೆಯ ತುಂಬ ಭತ್ತ ಬೆಳೆಯುತ್ತೇನೆ. ಭತ್ತದ ಕಟಾವು ಮುಗಿಯುತ್ತಿದ್ದಂತೆ ಗದ್ದೆಯಲ್ಲಿ ಬೇರೆ ಬೇರೆ ಬೆಳೆ ತೆಗೆಯಲು ಜಾಗ ಪಾಲು ಹಾಕಿ, ಕೆಲವು ಪಾಲಿನಲ್ಲಿ ತರಕಾರಿ, ಕೆಲವು ಪಾಲಿನಲ್ಲಿ ಸಿರಿಧಾನ್ಯ ಬೆಳೆಯುತ್ತೇನೆ. ಉಳಿದ ಜಾಗದಲ್ಲಿ ಶೇಂಗಾ ಸಮೃದ್ಧವಾಗಿ ಬೆಳೆಯುತ್ತದೆ’ ಎನ್ನುತ್ತಾರೆ ವೆಂಕಟರಮಣ ಗೌಡ.

‘ಅಲ್ಪಾವಧಿಯಲ್ಲಿ ಬೆಳೆಯುವ ರಾಗಿಯನ್ನು ಮಳೆಗಾಲ ಮುಗಿದ ತಕ್ಷಣವೇ ಬಿತ್ತನೆ ಮಾಡಿದ್ದೆ. ಎರಡು ತಿಂಗಳಲ್ಲಿ ಉತ್ತಮ ಫಸಲು ದೊರೆಯಿತು. ಕೊಯ್ಲು ಮುಗಿದ ಬೆನ್ನಲ್ಲೆ ಶೇಂಗಾ, ಬಿಳಿ ಎಳ್ಳು ಬಿತ್ತಿದ್ದೇನೆ. ಅವುಗಳ ಪಕ್ಕದಲ್ಲೇ ಮೂಲಂಗಿ, ಹರಿವೆ ಸೊಪ್ಪು, ಚವಳಿಕಾಯಿ ಬೆಳೆಯುತ್ತಿದ್ದೇನೆ. ಪ್ರತಿ ಕೊಯ್ಲಿಗೆ ಖರ್ಚು ವೆಚ್ಚ ಹೊರತುಪಡಿಸಿ ₹10ಸಾವಿರದಿಂದ ₹15 ಸಾವಿರ ಲಾಭ ಸಿಗುತ್ತಿದೆ’ ಎಂದು ವಿವರಿಸಿದರು.

ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದರೆ ಜನರ ಆರೋಗ್ಯ ರಕ್ಷಣೆ ಮಾಡಿದಂತೆ. ಆದಾಯ ಹೆಚ್ಚಿಸುವುದಕ್ಕಿಂತ ಆರೋಗ್ಯ ರಕ್ಷಣೆ ದೃಷ್ಟಿಕೋನದಿಂದ ಕೃಷಿ ಮಾಡುತ್ತೇನೆ
ವೆಂಕಟರಮಣ ಗೌಡ ರೈತ

ಹನಿ ರಾಸಾಯನಿಕ ಬಳಸಲ್ಲ

‘ಒಂದು ಹನಿ ರಾಸಾಯನಿಕ ಬಳಸದೆ ಕೃಷಿ ಚಟುವಟಿಕೆ ಮಾಡುತ್ತೇನೆ. ಮನೆಯಲ್ಲಾಗಲಿ ಗದ್ದೆಯಲ್ಲಾಗಲಿ ಯಾವುದೇ ರಾಸಾಯನಿಕ ಔಷಧ ಗೊಬ್ಬರದ ಲವಲೇಶ ಕಾಣಸಿಗದು. ಮನೆ ಅಂಗಳದಲ್ಲಿಯೇ ಎರೆಹುಳು ತೊಟ್ಟಿ ನಿರ್ಮಿಸಿಕೊಂಡಿದ್ದೇನೆ. ಅದರಿಂದ ದೊರೆಯುವ ಗೊಬ್ಬರ ಮಾತ್ರ ಉಪಯೋಗಿಸುತ್ತೇನೆ. ತರಕಾರಿ ಸಿರಿಧಾನ್ಯಗಳ ಸಸಿಗೆ ಕೀಟಬಾಧೆ ಉಂಟಾದರೆ ತುಂಬೆಸೊಪ್ಪು ನುಗ್ಗಿಸೊಪ್ಪು ಬೇವಿ ಸೊಪ್ಪಿನ ರಸದ ಮಿಶ್ರಣದೊಂದಿಗೆ ಗೋಮೂತ್ರ ಮತ್ತ ನೀರು ಬೆರೆಸಿ ಸಿಂಪಡಿಸುತ್ತೇನೆ. ಇದರಿಂದ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತದೆ’ ಎನ್ನುತ್ತಾರೆ ವೆಂಕಟರಮಣ ಗೌಡ. ‘ಭತ್ತವನ್ನು ಗಿರಣಿಗೆ ಕೊಂಡೊಯ್ಯುವುದಿಲ್ಲ. ಮನೆಯಲ್ಲೇ ಕುಚಲಕ್ಕಿ ಸಿದ್ಧಪಡಿಸುತ್ತೇವೆ. ಈ ಬಾರಿ ಸುಮಾರು 6 ಕ್ವಿಂಟಲ್‍ನಷ್ಟ ಕುಚಲಕ್ಕಿ ಮಾರಾಟ ಮಾಡಿದ್ದೇವೆ. ನಾವು ಬೆಳೆದ ಅಕ್ಕಿ ತರಕಾರಿ ಸಿರಿಧಾನ್ಯ ಮನೆಗೆ ಬಂದು ಖರೀದಿಸುವವರಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.