ADVERTISEMENT

ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ನಟ ಚೇತನ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:52 IST
Last Updated 3 ಏಪ್ರಿಲ್ 2025, 16:52 IST
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕಕ್ಕೆ  ಗುರುವಾರ ಭೇಟಿ ನೀಡಿದ ನಟ ಚೇತನ ಸುದ್ದಿಗಾರರ ಜೊತೆಗೆ ಮಾತನಾಡಿದರು
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕಕ್ಕೆ  ಗುರುವಾರ ಭೇಟಿ ನೀಡಿದ ನಟ ಚೇತನ ಸುದ್ದಿಗಾರರ ಜೊತೆಗೆ ಮಾತನಾಡಿದರು   

ಹೊನ್ನಾವರ: ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ಪರಿಸರ ಹಾಗೂ ಜನಜೀವನಕ್ಕೆ ಮಾರಕವಾಗಿದ್ದು ಬಂದರು ವಿರೋಧಿಸಿ ಕಾನೂನು ಸಮರ ಸೇರಿದಂತೆ ಸಂವಿಧಾನದಡಿಯಲ್ಲಿ ನಡೆಸುವ ಎಲ್ಲ ರೀತಿಯ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ' ಎಂದು ನಟ ಚೇತನ್ ಹೇಳಿದರು.

ಕಾಸರಕೋಡ ಟೊಂಕಕ್ಕೆ ಗುರುವಾರ ಭೇಟಿ ನೀಡಿ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಾಸರಕೋಡ ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಿಸಿದರೆ ಆಲಿವ್ ರಿಡ್ಲಿ ಆಮೆಗಳು ಮೊಟ್ಟೆಯಿಡುವ ಇಲ್ಲಿನ ಪರಿಸರದ ಸಮತೋಲನಕ್ಕೆ ಧಕ್ಕೆಯಾಗುತ್ತದೆ. ಸ್ಥಳೀಯ ಮೀನುಗಾರರು ನಿರ್ವಸತಿಕರಾಗುವ ಜೊತೆಗೆ ಅವರ ಸಾಂಪ್ರದಾಯಿಕ ಮೀನುಗಾರಿಕೆ ವೃತ್ತಿಗೆ ಸಂಚಕಾರ ಬರಲಿದೆ’ ಎಂದರು.

ADVERTISEMENT

‘ಕರಾವಳಿಯಲ್ಲಿ ಈಗಾಗಲೇ ಸಾಕಷ್ಟು ವಾಣಿಜ್ಯ ಬಂದರುಗಳಿದ್ದು ಟೊಂಕದಲ್ಲಿ ಮತ್ತೊಂದು ವಾಣಿಜ್ಯ ಬಂದರು ನಿರ್ಮಿಸುವ ಅಗತ್ಯವಿಲ್ಲ. ಶ್ರೀಮಂತರ ಜೇಬು ತುಂಬಿಸುವ ಯೋಜನೆ ಇದಾಗಿದ್ದು ವಾಮಮಾರ್ಗದ ಮೂಲಕ ವಾಣಿಜ್ಯ ಬಂದರಿಗೆ ಪರಿಸರ ಇಲಾಖೆ ಅನುಮತಿ ಪಡೆಯಲಾಗಿದೆ ಎಂಬ ಆಪಾದನೆ ಕೇಳಿಬರುತ್ತಿದೆ. ಬಂದರು ನಿರ್ಮಾಣ ವಿರೋಧಿಸಿದ ಹೋರಾಟಗಾರರ ವಿರುದ್ಧ ದೌರ್ಜನ್ಯ ಎಸಗಿದ್ದು, ಪೊಲೀಸ್ ವ್ಯವಸ್ಥೆ  ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

‘ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಕೈಬಿಡುವ ಜೊತೆಗೆ ವಾಣಿಜ್ಯ ಬಂದರು ವಿರೋಧಿಸಿದ ಜನರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ ಅವರು ಪ್ರಸ್ತುತ ವಾಣಿಜ್ಯ ಬಂದರು ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ಸಂಘಟಿಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.