ADVERTISEMENT

ಕೃಷಿ ಕಾರ್ಮಿಕರ ಮಕ್ಕಳೇ ಮೇಲುಗೈ, ವಿದ್ಯಾರ್ಥಿಗಳ ಸಾಧನೆಯ ಗುಟ್ಟು ‘ಮೊಬೈಲ್ ‌ರಹಿತ'

ಸಂಧ್ಯಾ ಹೆಗಡೆ
Published 15 ಜುಲೈ 2020, 16:33 IST
Last Updated 15 ಜುಲೈ 2020, 16:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
"ಶ್ವೇತಾ ದೇವಾಡಿಗ (ಶೇ 92.16)"

ಶಿರಸಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ವೇಳೆಗೆ ಈ ಬಾಲಕ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಕೂಲಿ ಕೆಲಸ ಮುಗಿಸಿ ಬಂದ ಬಾಲಕ, ಪಕ್ಕದ ಮನೆಯವರ ಮೊಬೈಲ್‌ನಲ್ಲಿ ಫಲಿತಾಂಶ ನೋಡಿದಾಗ, ಶೇ 91.5 ಅಂಕ ದೊರೆತಿದ್ದು ಕಂಡು ಸಂಭ್ರಮಿಸಿದ.

ಶ್ವೇತಾ ದೇವಾಡಿಗ

ಶಿರಸಿ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈ ಬಾಲಕ ಅಣ್ಣಪ್ಪ ಡಿ, ಸೊರಬ ತಾಲ್ಲೂಕು ಬೆನ್ನೂರಿನವನು. ಕಡುಬಡತನದ ಕಾರಣಕ್ಕೆ ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಉಳಿದು ಕಾಲೇಜಿಗೆ ಬರುತ್ತಿದ್ದ.

‘ಅಣ್ಣಪ್ಪನ ಮನೆಯಲ್ಲಿ ಐವರು ಸದಸ್ಯರಿದ್ದಾರೆ. ಅವರೆಲ್ಲ ಒಂದಲ್ಲ ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರು. ಹಿಡಿ ಜಮೀನು ಕೂಡ ಇಲ್ಲ. ಶಿಕ್ಷಣ ಪಡೆದಿದ್ದು ಅಣ್ಣಪ್ಪ ಮಾತ್ರ. ಪರೀಕ್ಷೆ ಮುಗಿದ ಮೇಲೆ ಕೆಲದಿನ ಕಟ್ಟಡವೊಂದಕ್ಕೆ ನೀರು ಹಾಕಲು ಹೋಗುತ್ತಿದ್ದ. ಈಗ ಹೊಲದ ಕೆಲಸಕ್ಕೆ ಹೋಗುತ್ತಾನೆ. ಅವನನ್ನು ಕಾಲೇಜಿಗೆ ಸೇರಿಸುವಾಗ ನನ್ನ ಮೊಬೈಲ್ ಸಂಖ್ಯೆಯನ್ನೇ ಕೊಟ್ಟಿದ್ದೆ. ಹೀಗಾಗಿ ಪರೀಕ್ಷೆ ಫಲಿತಾಂಶ ಕೂಡ ನನ್ನ ಮೊಬೈಲ್‌ಗೆ ಬಂದಿತ್ತು’ ಎಂದು ಆತನಿಗೆ ಮಾರ್ಗದರ್ಶನ ಮಾಡುತ್ತಿರುವ ಶಿಕ್ಷಕ ವಿಠ್ಠಲ ಹಡಪದ ಹೇಳಿದರು.

ADVERTISEMENT

‘ಪದವಿ ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಸೆಯಿದೆ’ ಎಂದು ಅಣ್ಣಪ್ಪ ಹೇಳಿದ.

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಇದೇ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ದೇವಾಡಿಗ (ಶೇ 92.16) ಮನೆಯಲ್ಲಿ ಅಮ್ಮನಿಗೆ ನೆರವಾಗಿ, ತಾಲ್ಲೂಕಿನ ಹೆಗಡೆಕಟ್ಟಾದಿಂದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕಾಲೇಜಿಗೆ ಬರುತ್ತಿದ್ದಳು. ‘ಅಮ್ಮ ಬೆಳಿಗ್ಗೆ ಕೂಲಿಗೆ ಹೋದರೆ, ಸಂಜೆ 6 ಗಂಟೆಗೆ ವಾಪಸ್ಸಾಗುತ್ತಾರೆ. ಅಮ್ಮ ಬರುವಷ್ಟರಲ್ಲಿ ಮನೆಗೆಲಸ ಮಾಡಿ, ಉಳಿದ ವೇಳೆಯನ್ನು ಓದಿಗೆ ಬಳಸಿಕೊಳ್ಳುತ್ತಿದ್ದೆ. ಕೂಲಿ ಹಣವೇ ಕುಟುಂಬದ ಜೀವನಾಧಾರ. ಕ್ಲಾಸಿನಲ್ಲಿ ಉಪನ್ಯಾಸಕರು ಪಾಠ ಮಾಡಿದ್ದನ್ನೇ ಲಕ್ಷ್ಯವಿಟ್ಟು ಕೇಳುತ್ತಿದ್ದೆ. ಯಾಕೆಂದರೆ ಹೆಚ್ಚು ಮಾಹಿತಿ ಪಡೆಯಲು ಮೊಬೈಲ್, ಇಂಟರ್‌ನೆಟ್ ಯಾವುದೂ ನಮ್ಮ ಬಳಿ ಇಲ್ಲ’ ಎಂದಳು ಶ್ವೇತಾ.

‘ನಾ ಹೊಲದ ಕೆಲ್ಸಕ್ಕೆ ಬಂದೇನಿ. ಮಗ ಶಿರಸಿಯಾಗ್ ಅದಾನ್ರಿ. ಅವ್ನಕಡಿ ಫೋನ್ ಇಲ್ರಿ. ಅವ ವಟ್ಟಾ ಮೊಬೈಲ್ ಬಳಸಲ್ರಿ. ಮಗ ಒಳ್ಳೆ ಮಾರ್ಕ್ಸ್ ತಗೊಂಡಿದ್ ಭಾಳ್ ಸಂತೋಷ ಆಗೈತ್ರಿ. ಎಂಜಿನಿಯರ್ ಆಗ್ಬೇಕು ಅಂತಾನ್ರಿ. ನಾವ್ ದುಡಿಯೋದೇ ಮಕ್ಕಳಿಗಾಗಿ, ಓದಸ್ಬೇಕಲ್ರಿ ಮತ್’ ಎಂದು ಮಾರಿಕಾಂಬಾ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿರುವ ನಾಗರಾಜ ಸುಣಗಾರ (ಶೇ 95.8) ತಂದೆ ಹಾನಗಲ್‌ ತಾಲ್ಲೂಕು ಹಿರೇಹುಲ್ಲಾಳದ ಮಾಲತೇಶ ಸುಣಗಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.