ADVERTISEMENT

ಕೋವಿಡ್ ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ

ಎಲ್ಲ ಕೋ ಮಾರ್ಬಿಡ್ ರೋಗಿಗಳಿಗೆ, 45 ವರ್ಷ ಮೇಲಿನವರಿಗೆ ಆರೈಕೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 13:39 IST
Last Updated 22 ಮೇ 2021, 13:39 IST
ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್   

ಕಾರವಾರ: ‘ಇನ್ನು ಮುಂದೆ 45 ವರ್ಷಕ್ಕಿಂತ ಮೇಲಿನ ಎಲ್ಲ ಸೋಂಕಿತರು ಮತ್ತು 45ಕ್ಕಿಂತ ಕೆಳಗಿನ ಎಲ್ಲ ಕೋ ಮಾರ್ಬಿಡ್ (ಮಧುಮೇಹ, ಹೃದ್ರೋಗ ಮುಂತಾದ ಆರೋಗ್ಯ ಸಮಸ್ಯೆ) ರೋಗಿಗಳಿಗೆ ಕೋವಿಡ್ ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆಯಲ್ಲೇ ಪ್ರತ್ಯೇಕ ಆರೈಕೆಗೆ ಅವಕಾಶ ಇಲ್ಲದ ಸೋಂಕಿತರನ್ನೂ ಆರೈಕೆ ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಗುತ್ತದೆ. ಹೋಂ ಐಸೋಲೇಷನ್ ಕಡಿಮೆ ಮಾಡಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಒಟ್ಟು 1,300 ಹಾಸಿಗೆಗಳ ವ್ಯವಸ್ಥೆಯಿದೆ. ಈವರೆಗೆ ಯಾರಿಗೂ ಹಾಸಿಗೆ ಲಭಿಸಿಲ್ಲ ಎಂಬ ದೂರುಗಳು ಬಂದಿಲ್ಲ. ತಾಲ್ಲೂಕು ಹಂತದಲ್ಲೂ ಉತ್ತಮವಾಗಿ ನಿಭಾಯಿಸಲಾಗುತ್ತಿದೆ’ ಎಂದರು.

ADVERTISEMENT

‘ಮೊದಲು ಸೋಂಕು ದೃಢಪಟ್ಟ ಬಳಿಕ ಔಷಧಿಗಳನ್ನು ನೀಡಲಾಗುತ್ತಿತ್ತು. ಈ ಕ್ರಮವನ್ನು ಈಗ ಬದಲಿಸಿದ್ದು, ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳುವಾಗಲೇ ಔಷಧಿಯ ಪೊಟ್ಟಣವನ್ನು ಕೊಡಲಾಗುತ್ತಿದೆ. ಇದರಿಂದ ಸೋಂಕಿಗೆ ಬೇಗ ಚಿಕಿತ್ಸೆ ಸಿಗುತ್ತಿದೆ’ ಎಂದು ಹೇಳಿದರು.

‘ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಇದರ ಅರ್ಥವಲ್ಲ. ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಹಚ್ಚಲಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನೇ ಕೇಂದ್ರೀಕರಿಸಿ ಅಚ್ಚುಕಟ್ಟಾಗಿ ಪರೀಕ್ಷೆ ಮಾಡಲಾಗುತ್ತಿದೆ. ಹಾಗಾಗಿ ಯಾರೂ ಆತಂಕ ಪಡಬೇಕಿಲ್ಲ’ ಎಂದು ಪ್ರತಿಪಾದಿಸಿದರು.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ವಿಶೇಷ ಘಟಕವನ್ನು ರಚಿಸಲಾಗಿದೆ. ಸೋಂಕಿತರನ್ನು ಮೊದಲೇ ಗುರುತಿಸುವುದು ಮತ್ತು ಶೀಘ್ರ ಚಿಕಿತ್ಸೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ 15 ದಿನಗಳ ಅವಧಿಯಲ್ಲಿ ಆಶಾ ಕಾರ್ಯಕರ್ತರ ಮೂಲಕ ಸುಮಾರು 9 ಸಾವಿರ ದೂರವಾಣಿ ಕರೆಗಳನ್ನು ಮಾಡಲಾಗಿದೆ. ಅವರಿಗೆ ಅಗತ್ಯ ಚಿಕಿತ್ಸೆ, ಸೌಲಭ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ತಾಲ್ಲೂಕು ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕದ ಹಾಸಿಗೆಗಳ ಬಳಕೆಯನ್ನು ಆರಂಭಿಸಲಾಗಿದೆ. ಸದ್ಯಕ್ಕೆ ಶಿರಸಿ, ಭಟ್ಕಳ ಮತ್ತು ಯಲ್ಲಾಪುರದಲ್ಲಿ ಉಪಯೋಗಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲದೇ ಕ್ರಿಮ್ಸ್‌ನಿಂದ ವೈದ್ಯರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ’ ಎಂದರು.

‘ಆರಂಭದಲ್ಲೇ ಚಿಕಿತ್ಸೆ ಅಗತ್ಯ’:

‘ಕೋವಿಡ್‌ನ ಎರಡನೇ ಅಲೆಯಲ್ಲಿ ಮೃತಪಟ್ಟವರ ಬಗ್ಗೆ ಅವಲೋಕನ ಮಾಡಿದಾಗ 30ರಿಂದ 45 ವರ್ಷದ ಒಳಗಿನವರೇ ಅಧಿಕ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಅವರು ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಅಷ್ಟರಲ್ಲಿ ಶ್ವಾಸಕೋಶವನ್ನಿಡೀ ಸೋಂಕು ಆವರಿಸಿರುತ್ತದೆ. ಆದ್ದರಿಂದ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

****

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರದಿಂದ ಆರೋಗ್ಯ ಸಮಸ್ಯೆಯ ಪ್ರಕರಣಗಳು ಈವರೆಗೆ ಪತ್ತೆಯಾಗಿಲ್ಲ. ಆದರೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ.

- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.