ADVERTISEMENT

ಸಿದ್ದಾಪುರ| ಗ್ರಾಮ ಪಂಚಾಯ್ತಿ ಕಟ್ಟಡಗಳಿಗೆ ಸೌರ ವಿದ್ಯುತ್

ಕೊರ್ಲಕೈ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:33 IST
Last Updated 21 ಜನವರಿ 2020, 16:33 IST
ಸಿದ್ದಾಪುರ ತಾಲ್ಲೂಕಿನ ಕೊರ್ಲಕೈ (ಆಡುಕಟ್ಟಾ) ಗ್ರಾಮ ಪಂಚಾಯ್ತಿಯ ನೂತನ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ಉದ್ಘಾಟಿಸಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ನಾಯ್ಕ ಚಿತ್ರದಲ್ಲಿದ್ದಾರೆ.
ಸಿದ್ದಾಪುರ ತಾಲ್ಲೂಕಿನ ಕೊರ್ಲಕೈ (ಆಡುಕಟ್ಟಾ) ಗ್ರಾಮ ಪಂಚಾಯ್ತಿಯ ನೂತನ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ಉದ್ಘಾಟಿಸಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ನಾಯ್ಕ ಚಿತ್ರದಲ್ಲಿದ್ದಾರೆ.   

ಸಿದ್ದಾಪುರ: ‘ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಕಟ್ಟಡಗಳಿಗೆ ಸೌರ ವಿದ್ಯುತ್ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಲ್ಲೂಕಿನ ಕೊರ್ಲಕೈ (ಆಡುಕಟ್ಟೆ) ಗ್ರಾಮ ಪಂಚಾಯ್ತಿಯ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಸ್ತೆ ಸುಧಾರಣೆ ಮತ್ತು ಹೊಸ ರಸ್ತೆ ನಿರ್ಮಾಣದ ಸಲುವಾಗಿ ನಮ್ಮ ಇಲಾಖೆಯಿಂದ ₹ 1,500 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಆರಂಭಗೊಳ್ಳಲಿದೆ. ಕೇಂದ್ರ ಸರ್ಕಾರದ ಘನ ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳು ಜಾರಿಗೊಳಿಸಬೇಕು’ ಎಂದರು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಉದ್ಯೋಗ ಖಾತರಿಯ ಯೋಜನೆಯಲ್ಲಿ ಹಣ ಲಭ್ಯವಿದೆ. ಆದರೆ, ಅದರಲ್ಲಿ ರೈತರಿಗೆ ಉಪಯುಕ್ತವಾಗುವ ಕೆಲಸ ಮಾಡಲು ಅಸಾಧ್ಯವಾಗಿದೆ. ಆದ್ದರಿಂದ ಈ ಯೋಜನೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾಮಗಾರಿ ಕೈಗೊಳ್ಳಲು ಅವಕಾಶ ಸಿಗಬೇಕು’ ಎಂದರು

ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ನಾಯ್ಕ ಮಾತನಾಡಿ, ‘ನಮ್ಮ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಗ್ರಾಮ ಪಂಚಾಯ್ತಿಯಲ್ಲಿ ಪಹಣಿ ಪತ್ರಿಕೆ ನೀಡುತ್ತಿಲ್ಲ. ಈ ಬಾರಿಯ ಭಾರಿ ಮಳೆಯ ಕಾರಣದಿಂದ ಹಲವರಿಗೆ ಬಸವ ಬಸತಿ ಯೋಜನೆಯಲ್ಲಿ ಮನೆಯನ್ನು ಪೂರ್ಣ ಕಟ್ಟಲು ಅಸಾಧ್ಯವಾಯಿತು. ಈ ರೀತಿ ಅರ್ಧ ಕಟ್ಟಿದ ಮನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಬಡವರಿಗೆ ತೊಂದರೆ ಉಂಟಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಸಚಿವರನ್ನು ಆಗ್ರಹಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಮತ್ತು ಕೊರ್ಲಕೈ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜ ಜಿಡ್ಡಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಾಗರಾಜ ನಾಯ್ಕ ಹಾಗೂ ಎಂ.ಜಿ.ಹೆಗಡೆ ಗೆಜ್ಜೆ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯೆ ಪದ್ಮಾವತಿ ಮಡಿವಾಳ, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ತಹಶೀಲ್ದಾರ್ ಮಂಜುಳಾ ಭಜಂತ್ರಿ ಇದ್ದರು. ಕಟ್ಟಡದ ಗುತ್ತಿಗೆದಾರ ಅರುಣಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಹನಾ ಸಂಗಡಿಗರು ಪ್ರಾರ್ಥನಾ ಗೀತೆಯನ್ನು, ಪೃಥ್ವಿ ಮತ್ತು ಸಂಗಡಿಗರು ನಾಡಗೀತೆಯನ್ನು ಹಾಡಿದರು. ಚಂದ್ರಶೇಖರ ನಾಯ್ಕ ಸ್ವಾಗತಿಸಿದರು. ಶಿವಕುಮಾರ್ ವಂದಿಸಿದರು. ವೆಂಕಟೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.