ಹೊನ್ನಾವರ ತಾಲ್ಲೂಕಿನ ಅಳ್ಳಂಕಿ ಗ್ರಾಮದ ಗುಡ್ಡದ ಮೇಲೆ ನಿರ್ಮಿಸಲಾದ ಅಂಬೇಡ್ಕರ್ ವಸತಿ ಶಾಲೆ
ಕಾರವಾರ: ಭೂಕುಸಿತದ ಕಾರಣದಿಂದ ಹೊನ್ನಾವರ ತಾಲ್ಲೂಕಿನ ಅಳ್ಳಂಕಿ ಗ್ರಾಮದ ಗುಡ್ಡದ ಮೇಲೆ ನಿರ್ಮಿಸಲಾದ ಅಂಬೇಡ್ಕರ್ ವಸತಿ ಶಾಲೆ ಈವರೆಗೂ ಬಳಕೆಯಾಗದೆ ಖಾಲಿ ಬಿದ್ದಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘವು (ಕ್ರೈಸ್) ಅಂದಾಜು ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಪೂರ್ಣಗೊಂಡು ವರ್ಷ ಕಳೆದಿದೆ. ಆದರೂ, ಕಟ್ಟಡ ಉದ್ಘಾಟನೆಯಾಗದೆ, ಬಳಕೆಗೆ ಸಿಗದ ಸ್ಥಿತಿಯಲ್ಲಿದೆ. ಸದ್ಯ ವಸತಿ ಶಾಲೆಯು ಇದೇ ಗ್ರಾಮದ ಬಾಡಿಗೆ ಕಟ್ಟಡವೊಂದರಲ್ಲಿ ನಡೆಯುತ್ತಿದೆ.
‘ಭೂಕುಸಿತ ಸಂಭವಿಸಬಹುದಾದ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿದ ಆರಂಭದಲ್ಲೇ ಗುಡ್ಡದ ಅಂಚು ಕುಸಿತವಾಗಿದೆ. ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ ಕೂಡ ಅವೈಜ್ಞಾನಿಕವಾಗಿದೆ’ ಎಂಬುದು ಸ್ಥಳೀಯರ ಆರೋಪ.
‘ಭೂಕುಸಿತ ಉಂಟಾಗುವ ಇಳಿಜಾರಿನ ದಿಕ್ಕಿನಲ್ಲೇ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಇಲ್ಲಿ ಕುಸಿತ ತಡೆಯಲು ದೀರ್ಘಕಾಲದ ಮಾರ್ಗೋಪಾಯ ಕೈಗೊಳ್ಳಬೇಕು. ಕಟ್ಟಡದ ಸುತ್ತಲೂ, ಗುಡ್ಡಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ಗುಡ್ಡದಿಂದ ನೀರು ಹರಿದು ಉಂಟಾಗುವ ಕೊರಕಲು ತಡೆಯಲು ಲಾವಂಚ ಮಾದರಿಯ ಮಣ್ಣು ಗಟ್ಟಿಯಾಗಿ ಹಿಡಿದಿಡುವ ಹುಲ್ಲುಗಳನ್ನು ಬೆಳೆಸಬೇಕು. ಆ ಬಳಿಕವೇ ಕಟ್ಟಡ ಬಳಕೆ ಮಾಡಬಹುದು. ಭೂಕುಸಿತದಿಂದ ಕಟ್ಟಡಕ್ಕೆ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಮೇ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ (ಜಿಎಸ್‌ಐ) ತಜ್ಞರು ವರದಿ ನೀಡಿದ್ದರು.
‘ಜಿಎಸ್‌ಐ ತಜ್ಞರ ವರದಿ ಆಧರಿಸಿ ಹುಲ್ಲುಹಾಸು ನೆಡಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ, ಕೆಂಪುಕಲ್ಲಿನ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರಕಲು ಉಂಟಾಗಿದೆ. ಇಂತಹ ಸ್ಥಳದಲ್ಲಿ ಹುಲ್ಲು ನೆಡಲು ಆಗದು ಎಂದು ಅವರು ತಿಳಿಸಿದ್ದಾರೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣವೇ ಪರಿಹಾರ ಎಂದು ವರದಿ ನೀಡಿದ್ದಾರೆ. ಇದನ್ನು ಆಧರಿಸಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಪನಿರ್ದೇಶಕ ವೈ.ಕೆ.ಉಮೇಶ್ ತಿಳಿಸಿದ್ದಾರೆ.
ಗುಡ್ಡ ಕುಸಿಯುವ ಆತಂಕವಿರುವುದರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಳ್ಳುವವರೆಗೆ ವಸತಿ ಶಾಲೆ ಕಟ್ಟಡ ಆರಂಭಿಸದಂತೆ ಕ್ರೈಸ್‌ಗೆ ಪತ್ರ ಬರೆಯಲಾಗಿದೆ.ವೈ.ಕೆ.ಉಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.