ADVERTISEMENT

ಶಿರಸಿ: ₹5 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:14 IST
Last Updated 26 ಅಕ್ಟೋಬರ್ 2021, 4:14 IST
   

ಶಿರಸಿ: ನಿಷೇಧಿತ ಆಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರನ್ನು ಸೋಮವಾರ ರಾತ್ರಿ ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಅಂದಾಜು ₹5 ಕೋಟಿ ಮೌಲ್ಯದ 5.50 ಕೆ.ಜಿ.ತೂಕದ ಆಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಮಹಾರಾಷ್ಟ್ರ ನೊಂದಣಿಯ ಕಾರನ್ನು ಜಫ್ತಿ ಮಾಡಲಾಗಿದೆ.

ಸದ್ಯ ಬೆಳಗಾವಿಯಲ್ಲಿ ವಾಸವಿದ್ದ ಅಂಕೋಲಾ ತಾಲ್ಲೂಕಿನ ಅವರ್ಸಾ ಮೂಲದ ಸಂತೋಷ ಬಾಲಚಂದ್ರ ಕಾಮತ್ (43), ಶಿರಸಿಯ ಮರಾಠಿಕೊಪ್ಪದ ರಾಜೇಶ ಮಂಜುನಾಥ ನಾಯ್ಕ ಅಲಿಯಾಸ್ ರಾಜೇಶ ಪೂಜಾರಿ (32) ಬಂಧಿತರು.

ADVERTISEMENT

'ಹಾವೇರಿಯ ಅನ್ನಪೂರ್ಣ ಎಂಬ ಮಹಿಳೆ ಇಲ್ಲಿನ ಮರಾಠಿಕೊಪ್ಪ 10ನೇ ಕ್ರಾಸ್‌ನಲ್ಲಿ ಆರೋಪಿಗಳಿಬ್ಬರಿಗೆ ಮಾರಾಟಕ್ಕಾಗಿ ಆಂಬರ್ ಗ್ರೀಸ್ ನೀಡಿದ ಮಾಹಿತಿ ಸಿಕ್ಕಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ. ಆರೋಪಿ ಅನ್ನಪೂರ್ಣ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೇವೆ' ಎಂದು ಸಿಪಿಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.

'ತಿಮಿಂಗಿಲದ ವಾಂತಿ ಅಕ್ರಮವಾಗಿ ಸಾಗಾಟ ನಡೆಸಿದ ಜಿಲ್ಲೆಯ ಮೊದಲ ಪ್ರಕರಣ ಇದಾಗಿದ್ದು, ಆರೋಪಿಗಳನ್ನು ಕೂಲಂಕಷ ವಿಚಾರಣೆ ನಡೆಸಲಾಗುತ್ತಿದೆ. ಆ ಬಳಿಕವೆ ವಸ್ತು ಎಲ್ಲಿ ದೊರೆಯಿತು, ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದು ಸ್ಪಷ್ಟವಾಗಲಿದೆ' ಎಂದು ಅವರು ತಿಳಿಸಿದ್ದಾರೆ.

ಪುನುಗು ಬೆಕ್ಕಿನ ಮಲದ ರೀತಿಯಲ್ಲೇ ತಿಮಿಂಗಿಲದ ವಾಂತಿಯೂ ಸುಗಂಧ ಬೀರುತ್ತದೆ. ಹಾಗಾಗಿ ಇದಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ನಮ್ಮ ದೇಶದಲ್ಲಿ ತಿಮಿಂಗಿಲಗಳನ್ನು ಅರಣ್ಯ ಕಾಯ್ದೆಯಡಿ ಸಂರಕ್ಷಿಸಲಾಗುತ್ತಿದೆ. ಅವುಗಳ ಯಾವುದೇ ಉತ್ಪನ್ನಗಳು, ಭಾಗಗಳನ್ನೂ ಬಳಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಆಂಬರ್ ಗ್ರೀಸ್ ಮಾರಾಟ, ಬಳಕೆಯೂ ಶಿಕ್ಷಾರ್ಹ ಅಪರಾಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.