ADVERTISEMENT

ಅಂಬಿಗರ ಸುಗ್ಗಿ ಕುಣಿತ ಆರಂಭ

ಹೋಳಿ ಹುಣ್ಣಿಮೆಯವರೆಗೆ ಮುಂದುವರಿಯುವ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 13:11 IST
Last Updated 15 ಮಾರ್ಚ್ 2019, 13:11 IST
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಅಂಬಿಗ ಸಮುದಾಯದವರು ಶುಕ್ರವಾರ ಸುಗ್ಗಿ ಕುಣಿತಕ್ಕೆ ಸಿದ್ಧತೆ ಮಾಡಿಕೊಂಡರು.
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಅಂಬಿಗ ಸಮುದಾಯದವರು ಶುಕ್ರವಾರ ಸುಗ್ಗಿ ಕುಣಿತಕ್ಕೆ ಸಿದ್ಧತೆ ಮಾಡಿಕೊಂಡರು.   

ಕಾರವಾರ: ತಾಲ್ಲೂಕಿನ ಮಾಜಾಳಿಯ ದಾಂಡೇಬಾಗದ ಕರಿನಾಸ ದೇವಸ್ಥಾನದಲ್ಲಿ ಅಂಬಿಗ ಸಮಾಜದವರು ಶುಕ್ರವಾರ ಸುಗ್ಗಿ ಕುಣಿತ ಆರಂಭಿಸಿದರು.ಹೋಳಿ ಹುಣ್ಣಿಮೆಯವರೆಗೂ ಈ ಸಂಭ್ರಮ ಮುಂದುವರಿಯುತ್ತದೆ.

ಒಂಬತ್ತುಗ್ರಾಮಗಳ ಅಂಬಿಗ ಸಮುದಾಯದವರು ಪಾಳಿ ಪ್ರಕಾರ ನಡೆಸುವ ಆಚರಣೆಯಲ್ಲಿ ಈ ಬಾರಿ ದಾಂಡೇಬಾಗ ಮತ್ತು ಸುತ್ತಲಿನವರಿಗೆ ಅವಕಾಶ ದೊರೆತಿದೆ.

ಆಚರಣೆ ಹೇಗಿರುತ್ತದೆ?:ಗ್ರಾಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಕರಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಸುಗ್ಗಿಯ ತುರಾಯಿ ಕಟ್ಟಿಕೊಂಡು ನೃತ್ಯ ಆರಂಭಿಸಲಾಯಿತು. ಹೋಳಿ ಹುಣ್ಣಿಮೆಯ ದಿನವಾದ ಮಾರ್ಚ್ 20ರವರೆಗೆಇದು ಮುಂದುವರಿಯತ್ತದೆ. ಈ ತಂಡದವರು ದೇವಬಾಗ, ಅಸ್ನೋಟಿ, ಕಿನ್ನರ, ಹಳಗಾ, ಹಣಕೋಣ, ಕಣಸಗಿರಿ, ಬಾವಳ, ನೆಚಕನಬಾಗ, ದಾಂಡೇಬಾಗ– ಹಿಪ್ಪಳಿ ಗ್ರಾಮದ ಮನೆ ಮನೆಗೆ ತೆರಳಿ ಕುಣಿತ ಪ್ರದರ್ಶಿಸಲಿದ್ದಾರೆ.

ADVERTISEMENT

ಹುಣ್ಣಿಮೆಯ ದಿನ ರಾತ್ರಿ ಸಮುದ್ರ ಸ್ನಾನ ಮಾಡಿ ಅಗ್ನಿಹಾಯ್ದುಪೂಜೆ ಮಾಡುವ ಮೂಲಕ ಆಚರಣೆ ಸಂಪನ್ನವಾಗುತ್ತದೆ. ಬುದಂತ ಮುರಳಿ ಮಾಜಾಳಿಕರ್, ಪಡದಾರ ಜ್ಞಾನೇಶ್ವರ ಖೊಬ್ರೇಕರ್, ಕೋಲಕಾರ ಸಂತೋಷ ತದಡಿಕರ, ಪೂಜಾರಿ ಉದಯ ಮಾಜಾಳಿಕರ್ಹಾಗೂ ಅನೇಕರು ಕುಣಿತದಲ್ಲಿ ಭಾಗಿಯಾಗಿದ್ದಾರೆ.

ತುರಾಯಿಯಲ್ಲಿಪ್ರಾತಿನಿಧ್ಯ:ಸುಗ್ಗಿ ಕುಣಿಯುವವರು 11 ತುರಾಯಿಗಳನ್ನು ಒಳಗೊಂಡ ಕಿರೀಟ ಧರಿಸುತ್ತಾರೆ. ಇವು ಅಂಬಿಗ ಸಮುದಾಯದ ಕುಟುಂಬಗಳನ್ನು ಪ್ರತಿನಿಧಿಸುತ್ತವೆ. ಬನವಾಸಿ ಭಾಗದಿಂದ ಬೆಂಡಿನ ಮಾದರಿಯ ಕೋಲುಗಳನ್ನು ತಂದು ಅವುಗಳಿಂದ ಹೂವುಗಳನ್ನು ತಯಾರಿಸಲಾಗುತ್ತದೆ. ನಂತರ ಗ್ರಾಮದ ಹಿರಿಯರು ತುರಾಯಿ ಕಟ್ಟುತ್ತಾರೆ.

ನೃತ್ಯ ಮಾಡುವವರು ಹಾಗೂ ಅವರ ಕುಟುಂಬದ ಮೀನುಗಾರಿಕೆಗೆ ಹೋಗುವುದಿಲ್ಲ. ರಾತ್ರಿ ಎಲ್ಲಿಗೆ ತಲುಪುತ್ತಾರೋ ಅಲ್ಲೇ ವಾಸ್ತವ್ಯ ಹೂಡುವುದು ವಿಶೇಷ.ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಮಾಂಸಾಹಾರವನ್ನೇ ಸೇವಿಸುವುದೂ ವಾಡಿಕೆ ಎನ್ನುತ್ತಾರೆ ಸಮುದಾಯದ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.