ADVERTISEMENT

ಕಾಂಗ್ರೆಸ್ ಮುಗಿಸಲು ಬಿಜೆಪಿಗೆ ಮತ ನೀಡಿ: ಸಂಸದ ಅನಂತಕುಮಾರ್ ಹೆಗಡೆ

ಸಂಸದ ಅನಂತಕುಮಾರ್ ಹೆಗಡೆ ಕರೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 14:06 IST
Last Updated 29 ನವೆಂಬರ್ 2019, 14:06 IST
ಮುಂಡಗೋಡ ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಂಸದ ಅನಂತಕುಮಾರ ಹೆಗಡೆ ಪ್ರಚಾರ ಸಭೆಯಲ್ಲಿ ಮಾತನಾಡಿದರು
ಮುಂಡಗೋಡ ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಂಸದ ಅನಂತಕುಮಾರ ಹೆಗಡೆ ಪ್ರಚಾರ ಸಭೆಯಲ್ಲಿ ಮಾತನಾಡಿದರು   

ಮುಂಡಗೋಡ: ‘ಅಯೋಧ್ಯೆ ರಾಮಮಂದಿರದ ತೀರ್ಪು ಬಂದಾಗ ಮುಸ್ಲಿಮರು ವಿರೋಧ ಮಾಡಲಿಲ್ಲ. ಆದರೆ, ಕಾಂಗ್ರೆಸ್‌ನವರು ಚಡ್ಡಿಗೆ ಬೆಂಕಿ ಬಿದ್ದಂತೆ ಕುಣಿದಾಡಿದರು. ಕಾಂಗ್ರೆಸ್‌ ಈ ದೇಶಕ್ಕೆ ಮಾರಕವಾಗಿದ್ದು, ಅದನ್ನು ಮುಗಿಸಬೇಕು’ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ತಾಲ್ಲೂಕಿನ ಇಂದೂರು, ಹುನಗುಂದ, ನಂದಿಗಟ್ಟಾ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಶುಕ್ರವಾರ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು. ದೇಶದ್ರೋಹಿಗಳು, ಸಮಾಜದ್ರೋಹಿಗಳನ್ನು ಅವರದ್ದೇ ಜಾಗದಲ್ಲಿ ಇಡಬೇಕಾಗಿದೆ. ಕಾಂಗ್ರೆಸ್ ಇಂತಹವರಿಗೆ ಸಹಾಯ ಮಾಡುತ್ತಿದೆ. ರಾಜಕೀಯ ನಕ್ಷೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕಾಗಿದೆ ಎಂದರು.

‘ಬುಲೆಟ್‌ ಟ್ರೇನ್‌ ಸೇರಿದಂತೆ ವಿವಿಧ ಅಭಿವೃದ್ಧಿಗೆ ಕೇಂದ್ರ ನೀಡಿದ್ದ ಹಣದಲ್ಲಿ ₹ 40ಸಾವಿರ ಕೋಟಿ ಮುಖ್ಯಮಂತ್ರಿ ಖಾತೆಯಲ್ಲಿ ಉಳಿದಿತ್ತು. ಅದನ್ನು ಕಬಳಿಸಬೇಕು ಎಂಬ ಯೋಚನೆ ಬೇರೆ ಪಕ್ಷಗಳಿಗೆ ಇತ್ತು. ಇದನ್ನು ತಪ್ಪಿಸಲು ಮಹಾರಾಷ್ಟ್ರದಲ್ಲಿ 80 ತಾಸಿನ ರಾಜಕೀಯ ನಾಟಕ ನಡೆಸಬೇಕಾಯಿತು. ದೇಶದ ದುಡ್ಡನ್ನು ಯಾರೂ ತಿನ್ನಬಾರದು ಎಂಬ ಒಂದೇ ಉದ್ದೇಶದಿಂದ, ಅಜಿತ ಪವಾರರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಲಾಯಿತು. ಮುಖ್ಯಮಂತ್ರಿ ಆದ ತಕ್ಷಣ ದೇವೇಂದ್ರ ಫಡಣವೀಸ್‌ ಅವರು ಆ ಹಣವನ್ನು ಕೇಂದ್ರ ಸರ್ಕಾರದ ಖಾತೆಗೆ ವರ್ಗಾಯಿಸಿದ್ದರು’ ಎಂದು ಹೇಳಿದರು.

ADVERTISEMENT

‘ಹಣ ವರ್ಗಾಯಿಸಿದ ನಂತರ ಬೆಂಕಿ ಬಿದ್ದವರಂತೆ, ಉಪಮುಖ್ಯಮಂತ್ರಿ ಗಲಾಟೆ ಮಾಡಿದರು. ಮುಖ್ಯಮಂತ್ರಿ ರಾಜೀನಾಮೆ ನೀಡಿ ಹೊರಬಂದರು. ನಾವು ಹುಚ್ಚರೋ, ಅವರು ಹುಚ್ಚರೋ ಎಂಬುದನ್ನು ಜನರು ನಿರ್ಧರಿಸಲಿ. ಪಕ್ಷದ ಮರ್ಯಾದೆ ಹೋದರೂ ಪರವಾಗಿಲ್ಲ, ದೇಶದ ಸಂಪತ್ತನ್ನು ಸರಿಯಾಗಿ ಇಟ್ಟು ವಾಪಸ್ಸು ಬಂದಿದ್ದೇವೆ. ಪತ್ರಿಕೆಯವರು ಏನಾದರೂ ಬರೆದುಕೊಳ್ಳಲಿ. ದೇಶಕ್ಕೆ ಒಳ್ಳೆಯದಾಗಬೇಕು. ಪ್ರಧಾನಮಂತ್ರಿ ಹೇಳಿದಂತೆ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.