ADVERTISEMENT

ಉ.ಕ.ದಲ್ಲಿ ಕಾರ್ಯಕರ್ತರಿಂದಲೇ ಚುನಾವಣೆ: ಅನಂತಕುಮಾರ್ ಹೆಗಡೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 14:02 IST
Last Updated 13 ಮೇ 2019, 14:02 IST
ಶಿರಸಿಯಲ್ಲಿ ನಡೆದ ಚುನಾವಣಾ ಅವಲೋಕನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಮಾತನಾಡಿದರು
ಶಿರಸಿಯಲ್ಲಿ ನಡೆದ ಚುನಾವಣಾ ಅವಲೋಕನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಮಾತನಾಡಿದರು   

ಶಿರಸಿ: ಇಡೀ ರಾಜ್ಯದಲ್ಲಿ ಗೆಲುವಿನ ಅತಿ ಹೆಚ್ಚು ವಿಶ್ವಾಸದಲ್ಲಿರುವ ಕ್ಷೇತ್ರ ಉತ್ತರ ಕನ್ನಡ. ಬೇರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದು ಚುನಾವಣೆ ನಡೆಸಿದರೆ, ಈ ಕ್ಷೇತ್ರದಲ್ಲಿ ಕಾರ್ಯಕರ್ತರು ಚುನಾವಣೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಹೇಳಿದರು.

ಸೋಮವಾರ ಇಲ್ಲಿ ಕರೆದಿದ್ದ ನಗರ ಹಾಗೂ ಗ್ರಾಮೀಣ ಘಟಕಗಳ ಅವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಅಲೆಯನ್ನು ಸಮರ್ಥವಾಗಿ ಚುನಾವಣೆಗೆ ಬಳಸಿಕೊಂಡಿದ್ದು ಸಂಘಟನೆ. ಸಂಘಟನೆ ಶಕ್ತಿಶಾಲಿಯಿದ್ದರೆ ಮಾತ್ರ ಯಾವುದೇ ಅಲೆಯನ್ನು ಹಿಡಿದಿಡಬಹುದು. ಜಿಲ್ಲಾ ಘಟಕದ ಅಧ್ಯಕ್ಷರಿಂದ ಕೊನೆಯ ಕಾರ್ಯಕರ್ತನವರೆಗೆ ಎಲ್ಲರಿಗೂ ವ್ಯವಸ್ಥಿತವಾದ ತರಬೇತಿ ದೊರೆತ ಕಾರಣ ಬಿಜೆಪಿ ಗೆಲುವಿಗೆ ಹತ್ತಿರ ತಲುಪಲು ಸಾಧ್ಯವಾಯಿತು. ಯುದ್ಧದಲ್ಲಿ ಖಾಲಿಯಾಗುವ ಸಿಡಿಮದ್ದುಗಳ ನೂರಾರು ಪಾಲು ಹೆಚ್ಚು ಸಿಡಿಮದ್ದು, ಯುದ್ಧಕ್ಕೂ ಮುನ್ನ ನಡೆಸುವ ಸೈನಿಕರ ತರಬೇತಿಗೆ ಬೇಕಾಗುತ್ತದೆ. ಅದೇ ರೀತಿ ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತರಿಗೆ ತರಬೇತಿ, ಸಿದ್ಧತೆ ನಡೆಸಲಾಗಿತ್ತು ಎಂದರು.

‘ಚುನಾವಣೆ ನಂತರ ಮತ್ತೆ ಕಾಂಗ್ರೆಸ್ ಬಲವಾಗುತ್ತದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಸರಿಸಮವಾಗಿ ನಿಲ್ಲಬಹುದು. ಹೀಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಕತೆ ಮುಗಿಯಿತು ಎನ್ನುವ ಮನಃಸ್ಥಿತಿ ಬೇಡ. ವಿರೋಧಿಗಳು ಎಂದಿಗೂ ಸುಮ್ಮನೆ ಇರುವುದಿಲ್ಲ. ನಮ್ಮ ಕಾಲಬುಡದಲ್ಲೇ ಬಿದ್ದಿರುವ ಮತಗಳಿಗಿಂತ ಹೆಚ್ಚಿನ ವಿರೋಧಿಗಳು ಇದ್ದಾರೆ’ ಎಂದು ಕಿವಿಮಾತು ಹೇಳಿದರು.

ADVERTISEMENT

ಪ್ರಮುಖ ನಂದನಸಾಗರ ಮಾತನಾಡಿ, ‘ಜಿಲ್ಲಾ ಪಂಚಾಯ್ತಿ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಮೈತ್ರಿಕೂಟದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇ ಹಾಸ್ಯಾಸ್ಪದ. ಪ್ರಸಕ್ತ ನಡೆದ ಲೋಕಸಭೆ ಚುನಾವಣೆಯಲ್ಲಿ ಹೆಗಡೆ ಅವರು ಐತಿಹಾಸಿಕ ಗೆಲುವು ದಾಖಲಿಸುವುದು ನಿಶ್ಚಿತವಾಗಿದೆ’ ಎಂದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹೆಗಡೆ ಮಾತನಾಡಿ, ‘ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ಕಾರ್ಯಕರ್ತರು ಹಣಕ್ಕಾಗಿ ದುಡಿಯುತ್ತಾರೆ. ಇಂಥ ವ್ಯವಸ್ಥೆ ಬಿಜೆಪಿಯಲ್ಲಿ ಇರದ ಕಾರಣ ಗೆಲುವು ಕೂಡ ಅಷ್ಟೇ ವಿಶೇಷವಾಗಿರಲಿದೆ’ ಎಂದರು. ರೈತ ಮೋರ್ಚಾ ಘಟಕದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ಉಷಾ ಹೆಗಡೆ, ಪ್ರಭಾವತಿ ಗೌಡ, ರಮಾಕಾಂತ ಭಟ್ಟ, ರಿತೇಶ ಕೆ, ಚಂದ್ರು ದೇವಾಡಿಗ ಇದ್ದರು. ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.