
ಶಿರಸಿ: ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಂಡಿದ್ದ ನಗರದ ಸನಿಹದ ಆನೆಹೊಂಡ ಕೆರೆಗೆ ನಗರದ ತ್ಯಾಜ್ಯ ಇಂಗುವುದು ಒಂದು ಸಮಸ್ಯೆಯಾದರೆ ಕೆರೆಯ ಸುತ್ತಮುತ್ತಲ ಪ್ರದೇಶ ಕಸದ ತೊಟ್ಟಿಯಾಗಿ ಮಾರ್ಪಡುತ್ತಿರುವುದು ಇನ್ನೊಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಪುನರುಜ್ಜಿವನಗೊಂಡ ಆನೆಹೊಂಡವು ನಗರದಂಚಿಗೆ ಪೊಲೀಸ್ ವಸತಿ ಗೃಹದ ಸಮೀಪದಲ್ಲೇ ಇದೆ. ವಸತಿ ಗೃಹದ ಕೊಳಚೆ ನೀರೆಲ್ಲ ಆನೆಹೊಂಡದಿಂದ ಮೇಲ್‌ಹಂತದಲ್ಲಿನ ಕಾಲುವೆ ಮಾರ್ಗವಾಗಿಯೇ ಮುಂದೆ ಸಾಗಬೇಕು. ಹೀಗೆ ಸಾಗುವಾಗ ಇಂಗುವ ನೀರು ಆನೆಹೊಂಡಕ್ಕೆ ಸೇರಿ ಕಲ್ಮಶಗೊಳಿಸುತ್ತಿದೆ.
‘ಕೊಳಚೆ ನೀರು ಆನೆಹೊಂಡ ಕೆರೆ ಸುತ್ತ ಹರಿಯುತ್ತಿದೆ. ವಸತಿ ಗೃಹದ ನೀರು ಆವರಣದೊಳಗೆ ಇಂಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣಕ್ಕೆ ತೆರೆದ ಚರಂಡಿ ಮೂಲಕ ಹರಿಯುವ ನೀರು ಕೆರೆಯ ಸ್ವಾಸ್ಥ್ಯ ಕೆಡಿಸುತ್ತಿದೆ. ಪ್ರಸ್ತುತ ವಸತಿ ಕಟ್ಟಡದಲ್ಲಿ 24 ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಇಬ್ಬರು ಪಿಎಸ್‌ಐಗಳಿಗೆ ಮನೆ ಹಂಚಿಕೆ ಮಾಡಲಾಗಿದೆ. ಶೌಚಗೃಹದ ನೀರು ಇಂಗಲು ಮಾತ್ರ ಆವರಣದೊಳಗೆ ವ್ಯವಸ್ಥೆ ಮಾಡಲಾಗಿದ್ದು, ಉಳಿದೆಲ್ಲ ಕೊಳಚೆ ಚರಂಡಿಗೆ ಸೇರುತ್ತದೆ’ ಎಂಬುದು ಸ್ಥಳಿಕರ ದೂರಾಗಿದೆ.
‘ಮೀನುಗಾರಿಕೆ ಇಲಾಖೆ ಸಮೀಪ ನಿರ್ಮಿಸಿದ ಮೂತ್ರಾಲಯದ ಕೊಳಚೆ ನೀರು ಇದೇ ಮಾರ್ಗವಾಗಿ ಸಾಗುತ್ತದೆ. ಪ್ರಸ್ತುತ ಆಡಳಿತ ಕಚೇರಿಗಳ ಸಂಕೀರ್ಣದ ತ್ಯಾಜ್ಯ ನೀರು ಇದೇ ಚರಂಡಿಗೆ ಸೇರುತ್ತದೆ. ಕಾರಣ ಮತ್ತಷ್ಟು ಗಲೀಜು ಆಗುವ ಸಾಧ್ಯತೆಯಿದೆ. ಪ್ರಸ್ತುತ ನಗರದ ತ್ಯಾಜ್ಯ ರಾಶಿಯನ್ನು ಕೆರೆ ಸುತ್ತ ಚೆಲ್ಲಲಾಗುತ್ತಿದ್ದು, ನಿಯಂತ್ರಣಕ್ಕೆ ಕಷ್ಟಸಾಧ್ಯವಾಗಿದೆ’ ಎನ್ನುತ್ತಾರೆ ಸ್ಥಳಿಕರಾದ ಚಂದ್ರು ನಾಯ್ಕ.
‘ನಗರದ ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಹತ್ತಿರವಿರುವ ತೆರೆದ ಬಾವಿಯ ನೀರಿನಲ್ಲಿ ಕೂಡ ಹುಳುಗಳಾಗಿವೆ. ಹೀಗಾಗಿ, ಅನಿವಾರ್ಯ ಸಂದರ್ಭದಲ್ಲಿ ಈ ನೀರು ಬಳಕೆಗೆ ಅಯೋಗ್ಯವಾಗುತ್ತಿದೆ. ಗಲೀಜು ನೀರು ತೆರೆದ ವಾತಾವರಣದಲ್ಲಿ ಹರಿಯುವ ಕಾರಣಕ್ಕೆ ಸುತ್ತಮುತ್ತಲ ಪ್ರದೇಶ ಗಬ್ಬು ನಾರುತ್ತಿದ್ದು, ಜನಸಂಚಾರಕ್ಕೂ ತೊಡಕಾಗಿದೆ’ ಎನ್ನುತ್ತಾರೆ ಅವರು.
ಜನರ ಸಹಕಾರದಲ್ಲಿ ಅಭಿವೃದ್ಧಿಯಾದ ಕೆರೆ ಇತ್ತೀಚಿನ ವರ್ಷಗಳಲ್ಲಿ ಹದಗೆಡುತ್ತಿದೆ. ಈ ಭಾಗದಲ್ಲಿ ಕಸ ಚೆಲ್ಲುವವರ ಮೇಲೆ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತ ಕಾಂಕ್ರೀಟ್ ಚರಂಡಿ ನಿರ್ಮಿಸುವ ಕಾರ್ಯವಾಗಬೇಕು.ವಾಸುದೇವ ಭಟ್ ಸಾಮಾಜಿಕ ಕಾರ್ಯಕರ್ತ
ಹೆಚ್ಚುತ್ತಿರುವ ತ್ಯಾಜ್ಯ:
‘ನಗರದ ಸಮೀಪ ಇರುವ ಕಾರಣ ಕಟ್ಟಡ ತ್ಯಾಜ್ಯ ಸೇರಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಹೆಚ್ಚಾಗಿದೆ. ಈ ಹಿಂದೆ ಜೀವಜಲ ಕಾರ್ಯಪಡೆ ವತಿಯಿಂದ ಸ್ವಚ್ಛತೆ ಕಾರ್ಯ ನಡೆಸಲಾಗಿತ್ತಾದರೂ ಮತ್ತೆ ಮತ್ತೆ ಮದ್ಯದ ಬಾಟಲಿಗಳು ತ್ಯಾಜ್ಯ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗದಿದ್ದರೂ ಮಾನವೀಯ ಹಾಗೂ ಸ್ವಚ್ಛತೆ ದೃಷ್ಟಿಯಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.