ADVERTISEMENT

ಅಂಕೋಲಾ: ಇನ್ನೂ ಶುರುವಾಗದ ಅಂಗನವಾಡಿ ನಿರ್ಮಾಣ

ಅಂಕೋಲಾ ತಾಲ್ಲೂಕಿನ ವಿವಿಧೆಡೆ ಐದು ಕಟ್ಟಡಗಳಿಗೆ ತಲಾ ₹15 ಲಕ್ಷ ಮಂಜೂರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 20:00 IST
Last Updated 9 ಅಕ್ಟೋಬರ್ 2020, 20:00 IST
ಅಂಕೋಲಾ ತಾಲ್ಲೂಕಿನ ಕೂರ್ವೆಯಲ್ಲಿ ಅಂಗನವಾಡಿ ಕಟ್ಟಡ ಕುಸಿಯುವ ಹಂತದಲ್ಲಿದೆ
ಅಂಕೋಲಾ ತಾಲ್ಲೂಕಿನ ಕೂರ್ವೆಯಲ್ಲಿ ಅಂಗನವಾಡಿ ಕಟ್ಟಡ ಕುಸಿಯುವ ಹಂತದಲ್ಲಿದೆ   

ಅಂಕೋಲಾ: ಕಳೆದ ವರ್ಷ ನೆರೆ ಹಾವಳಿಯಿಂದ ತಾಲ್ಲೂಕು ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಹಾನಿ ಅನುಭವಿಸಿತ್ತು. ಸತತವಾಗಿ ಪ್ರವಾಹದ ನೀರು ಆವೃತವಾಗಿದ್ದರಿಂದ ತಾಲ್ಲೂಕಿನ ಐದು ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿದ್ದವು. ಅವುಗಳ ನಿರ್ಮಾಣಕ್ಕೆ ತಲಾ ₹15 ಲಕ್ಷ ಮಂಜೂರಾಗಿದೆ. ಆದರೆ, ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ತಾಲ್ಲೂಕಿನ ಶಿರೂರು ದಂಡೆಭಾಗ, ಕೂರ್ವೆ, ಹಿಚ್ಕಡ ದಂಡೆಭಾಗ, ಹಿಲ್ಲೂರು ತೊಗ್ಸೆ, ವೈದ್ಯ ಹೆಗ್ಗಾರದಲ್ಲಿನ ಕಟ್ಟಡಗಳು ಸಂಪೂರ್ಣ ಹಾನಿಗೊಂಡಿದ್ದವು. ಅಂಗನವಾಡಿ ಕುಸಿಯುವ ಭೀತಿಯಲ್ಲಿ ಇದ್ದ ಕಾರಣ ಮಕ್ಕಳನ್ನು ಕೂರಿಸುವುದು ಅಸಾಧ್ಯವಾಗಿತ್ತು. ಹಾಗಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಬಾಡಿಗೆ ಕಟ್ಟಡದಲ್ಲಿ ತಿಂಗಳ ಬಾಡಿಗೆ ರೂಪದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೈಗೊಂಡ ತಾತ್ಕಾಲಿಕ ಕ್ರಮವನ್ನು ನಾಗರಿಕರು ಶ್ಲಾಘಿಸಿದ್ದರು.

ಅಂಗನವಾಡಿಗಳಲ್ಲಿ ಮಕ್ಕಳ ಕಲಿಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸ್ವಂತ ಕಟ್ಟಡ ಅವಶ್ಯಕವಾಗಿತ್ತು. ಕೋವಿಡ್ ಕಾರಣದಿಂದ ಈಗ ಅಂಗನವಾಡಿಗೆ ಮಕ್ಕಳನ್ನು ಕರೆಸುವಂತಿಲ್ಲ. ಆದರೆ, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರಿಗೆ ಬರುವ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ ಇವುಗಳ ದಾಸ್ತಾನು ಮತ್ತು ನಿರ್ವಹಣೆಗೆ ತೊಂದರೆ ಆಗುತ್ತದೆ. ಒಂದು ವೇಳೆ ಅಂಗನವಾಡಿ ತರಗತಿಗಳನ್ನು ಮತ್ತೆ ಪ್ರಾರಂಭಿಸಿದರೆ ಬಾಡಿಗೆ ಕಟ್ಟಡದಲ್ಲಿ ಮುಂದುವರಿಯಬೇಕಾಗುತ್ತದೆ. ಇದರಿಂದ ಅನಾವಶ್ಯಕವಾಗಿ ಸರ್ಕಾರಕ್ಕೆ ಹೊರೆಯಾಗುತ್ತಿದೆ.

ADVERTISEMENT

ಕಳೆದ ವರ್ಷ ಹಾನಿಗೀಡಾದ ಪ್ರತಿ ಅಂಗನವಾಡಿ ಕಟ್ಟಡಕ್ಕೂ ತಲಾ ₹15 ಲಕ್ಷ ಅನುದಾನವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಬಿಡುಗಡೆಯಾಗಿದೆ. ಕಾಮಗಾರಿಯ ಸಂಪೂರ್ಣ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಲಾಗಿದೆ. ಅನುದಾನದ ಪೂರ್ಣ ಪ್ರಮಾಣದ ಹಣವು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಯೂ ಆಗಿದೆ.

ಅಂಕೋಲಾ ಲೋಕೋಪಯೋಗಿ ಉಪವಿಭಾಗಾಧಿಕಾರಿಗಳು ಈಗಾಗಲೇ ಅಂದಾಜು ಲೆಕ್ಕಚಾರವನ್ನು ಸಿದ್ಧಪಡಿಸಿ ಕಾರವಾರ ವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಿ ಹಲವು ತಿಂಗಳು ಕಳೆದಿವೆ. ಆದರೆ, ಕಾಮಗಾರಿ ಆರಂಭವಾಗಿಲ್ಲ. ಇನ್ನಷ್ಟು ವಿಳಂಬ ಮಾಡದೇ ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿ ಎಂಬುದು ಜನರ ಬೇಡಿಕೆಯಾಗಿದೆ.

‘ಸ್ವೀಕೃತಿ ಪತ್ರ ಸಿಗಬೇಕಿದೆ’:‘ಅಂಗನವಾಡಿ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ವೀಕೃತಿ ಪತ್ರ ನೀಡಿದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಕಟ್ಟಡದ ಕಾಮಗಾರಿ ಪಾರದರ್ಶಕವಾಗಿ ನಡೆಯಲಿದೆ’ ಎನ್ನುತ್ತಾರೆಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಮ ಅರ್ಗೇಕರ್.

‘ತಾಲ್ಲೂಕಿನ ಐದು ಕಟ್ಟಡಗಳಿಗೆ ಅನುದಾನ ಮಂಜೂರಾಗಿದ್ದು, ನೇರವಾಗಿ ಲೋಕೋಪಯೋಗಿ ಇಲಾಖೆಗೆ ಅನುದಾನ ವರ್ಗಾವಣೆಯಾಗಿದೆ. ಆದಷ್ಟು ಬೇಗ ಲೋಕೋಪಯೋಗಿ ಇಲಾಖೆಯು ಕಾಮಗಾರಿ ಆರಂಭಿಸಲಿದೆ’ ಎನ್ನುತ್ತಾರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ.ಜಿ.ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.