
ಅಂಕೋಲಾ: ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಅಧಿಕಾರವಧಿ ಸದ್ಯ ಮುಗಿಯುತ್ತಿದ್ದು, ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ ಚುನಾವಣೆಯವರೆಗೂ ಈಗಿರುವ ಜನಪ್ರತಿನಿಧಿಗಳನ್ನೇ ಮುಂದುವರಿಸಬೇಕೆಂದು ತಾಲ್ಲೂಕು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದಿಂದ ಬುಧವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಮುಂದಿನ ತಿಂಗಳು ಫೆಬ್ರವರಿಯಲ್ಲಿ ರಾಜ್ಯದ ಸುಮಾರು ಆರು ಸಾವಿರ ಜನಪ್ರತಿನಿಧಿಗಳ ಅಧಿಕಾರ ಮುಗಿಯುತ್ತಿದ್ದು, ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ಸಕಾಲದಲ್ಲಿ ನಡೆಸದೇ ಚುನಾವಣೆ ನಡೆಯುವವರೆಗೆ ಪಂಚಾಯಿತಿ ಸದಸ್ಯರ ಸ್ಥಾನಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಿಸುವಂತೆ ಆದೇಶ ಮಾಡಿದೆ. ಇದು ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸರ್ಕಾರಗಳಿಗೆ ಸಂವಿಧಾನ ಬದ್ಧವಾಗಿ ದೊರೆತ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಜನರಿಗೋಸ್ಕರ ಜನರಿಂದ ಆರಿಸಲ್ಪಟ್ಟ ಪಂಚಾಯಿತಿ ಜನಪ್ರತಿನಿಧಿಗಳ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಸರ್ಕಾರದ ಈ ನಿರ್ಧಾರ ಸರಿಯಲ್ಲ.
‘ಅಂಕೋಲಾ ತಾಲ್ಲೂಕಿನ 21 ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟ ಹಾಗೂ ರಾಜ್ಯದ ಮಹಾ ಒಕ್ಕೂಟ ಇದಕ್ಕೆ ಪೂರಕವಾಗಿ ಧ್ವನಿ ಎತ್ತಿದ್ದು, ಮಹಾ ಒಕ್ಕೂಟದ ಬೇಡಿಕೆಯಂತೆ ನಮ್ಮ ಬೇಡಿಕೆಇದ್ದು ನಾವು ತಮ್ಮ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಹಾಗೂ ಆಡಳಿತಾಧಿಕಾರಿಗಳ ಬದಲಾಗಿ ಚುನಾವಣೆಯವರೆಗೆ ಈಗಿರುವ ಜನಪ್ರತಿನಿಧಿಗಳನ್ನೇ ಮುಂದುವರಿಸಬೇಕು’ ಎಂದು ಮನವಿ ಸಲ್ಲಿಸಿದರು.
ತಾಲ್ಲೂಕು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್ ನಾಯಕ, ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ, ದೀಪಾ ನಾಯಕ, ನಿರ್ಮಲಾ ನಾಯಕ, ಮಂಕಾಳಿ ಸಿದ್ದಿ, ರವಿ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.