ಕಾರವಾರ: ಸತತ ಮಳೆಯಿಂದ ಜೊಯಿಡಾ ತಾಲ್ಲೂಕಿನ ಅನಮೋಡ ಗಡಿಭಾಗದಿಂದ 4 ಕಿ.ಮೀ ದೂರದಲ್ಲಿ, ಗೋವಾ ರಾಜ್ಯದ ಅನಮೋಡ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 4ಎ ಅಂಚಿನಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಈ ಮಾರ್ಗದಲ್ಲಿ ಸದ್ಯಕ್ಕೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
‘ಭೂ ಕುಸಿತದಿಂದ ಹೆದ್ದಾರಿಯ ಅಲ್ಪಭಾಗವೂ ಕೊಚ್ಚಿಹೋಗಿದೆ. ಸದ್ಯ ಲಘು ವಾಹನಗಳು ಸಂಚರಿಸುತ್ತಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ನಾರಾಯಣ ತಿಳಿಸಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ರಾಮನಗರ ಮಾರ್ಗವಾಗಿ ಗೋವಾ ಸಾಗಲು ಮುಖ್ಯ ಮಾರ್ಗ ಇದಾಗಿದ್ದು, ನೂರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ಈ ಮಾರ್ಗವು ಸಂಪೂರ್ಣ ಸ್ಥಗಿತಗೊಂಡರೆ ವಾಹನಗಳು ನೂರಾರು ಕಿ.ಮೀ ದೂರ ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವೇಗದ ಗಾಳಿ ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.