ADVERTISEMENT

ಶಿರಸಿ| ಬಜೆಟ್‌ನಲ್ಲಿ ಬಿದಿರಿಗೆ ಆಧ್ಯತೆ ಸಿಗಲಿ:ಸದಾನಂದ ಭಟ್ಟ

ವಿಶೇಷ ಯೋಜನೆ ರೂಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:58 IST
Last Updated 23 ಜನವರಿ 2020, 15:58 IST
ಸದಾನಂದ ಭಟ್ಟ
ಸದಾನಂದ ಭಟ್ಟ   

ಶಿರಸಿ: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿದಿರು ಬೆಳೆಗೆ ವಿಶೇಷ ಯೋಜನೆ ರೂಪಿಸಿ, ಬರುವ ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮ ಘೋಷಿಸಬೇಕು ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ಭಟ್ಟ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಬಿದಿರು ಬೆಳೆಯಲು ವಿಪುಲ ಅವಕಾಶಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬಾಂಬು ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಪ್ರಸ್ತಾವಕ್ಕೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅರಣ್ಯ ಸಚಿವ ಬಿ.ಸಿ.ಪಾಟೀಲ ಅವರಿಗೆ ಸದಾನಂದ ಭಟ್ಟ ಪತ್ರ ಬರೆದಿದ್ದಾರೆ.

ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಕೃಷಿ ತಜ್ಞ ಕೆ.ಎಂ.ಹೆಗಡೆ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪಿಸಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಲ್ಲಿಸಲಾಗಿತ್ತು. ನೆರೆ ಪೀಡಿತ ಪ್ರದೇಶಗಳಲ್ಲಿ ಬಿದಿರು ಬೆಳೆಸುವುದರಿಂದ ಆಗಬಹುದಾದ ಅನಾಹುತ ತಡೆಯಲು ಸಾಧ್ಯತೆ ಇದೆ. ಬಯಲು ಪ್ರದೇಶ, ನದಿ ಮತ್ತು ಹೊಳೆ ದಡಗಳಲ್ಲಿ ಬಿದಿರು ನೆಡುವುದರಿಂದ ಒಳ್ಳೆಯ ಪರಿಣಾಮ ಪಡೆಯಬಹುದು. ರೈತರ ಬಂಜರು ಮತ್ತು ಬೀಳು ಬಿಟ್ಟಿರುವ ಜಮೀನುಗಳಲ್ಲಿ ಇದನ್ನು ಬೆಳೆಯಲು ಪ್ರೋತ್ಸಾಹಿಸುವುದರಿಂದ ಧೀರ್ಘಾವಧಿಯವರೆಗೆ ಉತ್ತಮ ಆದಾಯ ಸಿಗಬಹುದು ಎಂದು ಅವರು ಸಲಹೆ ಮಾಡಿದ್ದಾರೆ.

ADVERTISEMENT

ಬೆಟ್ಟ, ಕುಂಕಿ, ಬಾಣೆ, ಹಾಡಿ ಮೊದಲಾದವುಗಳಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿಯಿಂದ ಲಾಭ ಹಂಚಿಕೆ ವಿಧಾನದಲ್ಲಿ ಬಿದಿರು ಬೆಳೆಯಲು ಪ್ರೋತ್ಸಾಹಿಸಬಹುದು. ಜಿಲ್ಲೆಯಲ್ಲಿ ಇದಕ್ಕೆ ಬೆಟ್ಟ ಬಳಕೆ ಮಾಡಿಕೊಂಡಲ್ಲಿ ರೈತರಿಗೆ ಹೊಸ ಆರ್ಥಿಕ ಶಕ್ತಿ ಬರಲಿದೆ. ಗ್ರಾಮ ಅರಣ್ಯ ಸಮಿತಿ, ರೈತರು ಮತ್ತು ಸಾಮಾಜಿಕ ಸಹಭಾಗಿತ್ವದಡಿಯಲ್ಲಿ ಬಿದಿರನ್ನು ಪರ್ಯಾಯ ಬೆಳೆಯನ್ನಾಗಿಸಲು ದೊಡ್ಡ ಅವಕಾಶವಿದೆ. ಬಿದಿರಿನಿಂದ ಗುಡಿ ಕೈಗಾರಿಕೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.