ADVERTISEMENT

ನೌಕಾನೆಲೆಯ ಸಿಬ್ಬಂದಿಗೆ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:11 IST
Last Updated 9 ಜುಲೈ 2020, 14:11 IST

ಕಾರವಾರ: ದ್ವಿಚಕ್ರ ವಾಹನ ಮಾರಾಟದ ನೆಪದಲ್ಲಿ ಇಲ್ಲಿನ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಯೊಬ್ಬರಿಗೆ ಮೋಸಗಾರನೊಬ್ಬ ಒಟ್ಟು ₹ 1.32 ಲಕ್ಷ ವಂಚಿಸಿದ್ದಾನೆ. ಈ ಸಂಬಂಧ ಮಯಾಂಕ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಹೋಂಡಾ ಆ್ಯಕ್ಟಿವಾ ವಾಹನವೊಂದು ₹ 30 ಸಾವಿರಕ್ಕೆ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ನೋಡಿದ ಅವರು, ಅದರಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದ್ದರು. ತನ್ನನ್ನು ಭಾರತೀಯ ಸೈನ್ಯದಲ್ಲಿ ಯೋಧ ಎಂದು ಪರಿಚಯಿಸಿಕೊಂಡ ಆರೋಪಿಯು, ವಾಹನದ ಫೋಟೊ ಹಾಗೂ ಇತರ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮಾಡಿದ್ದ. ತನ್ನ ಪೇಟಿಎಂ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದ. ಅದರಂತೆ ಮಯಾಂಕ್, ₹ 30 ಸಾವಿರ ಪಾವತಿಸಿದ್ದರು.

ಆರೋಪಿಯು ಪುನಃ ಕರೆ ಮಾಡಿ ವಾಹನದ ಆರ್.ಟಿ.ಒ ನೋಂದಣಿ ಬದಲಿಸಲು ₹ 12,550 ಹಾಗೂ ತೆರಿಗೆ ₹ 50 ನೀಡಲು ತಿಳಿಸಿದ್ದ. ಅದನ್ನೂ ನಂಬಿ ಹಣ ಪಾವತಿಸಿದ್ದರು. ಹೀಗೆ ಹಂತಹಂತವಾಗಿ ₹ 1.32 ಲಕ್ಷವನ್ನು ಆತನ ಖಾತೆಗೆ ವರ್ಗಾಯಿಸಿದ್ದರು. ಶೀಘ್ರವೇ ಹಣ ವಾಪಸ್ ಮಾಡುವುದಾಗಿ ಆರೋಪಿ ಭರವಸೆ ನೀಡಿದ್ದರು. ಆದರೆ, ವಾಹನವನ್ನೂ ನೀಡದೇ ಹಣವನ್ನೂ ಮರಳಿಸದೇ ಆತ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.‌

ADVERTISEMENT

ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.