ADVERTISEMENT

ಉತ್ತರ ಕನ್ನಡ | ಮಾದಕ ದ್ರವ್ಯ ವಿರೋಧಿ ಸಮಿತಿ ರಚನೆ ಕಡ್ಡಾಯ

ಎನ್‌ಕಾರ್ಡ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:12 IST
Last Updated 24 ಸೆಪ್ಟೆಂಬರ್ 2025, 4:12 IST
ಕೆ.ಲಕ್ಷ್ಮಿಪ್ರಿಯಾ
ಕೆ.ಲಕ್ಷ್ಮಿಪ್ರಿಯಾ   

ಕಾರವಾರ: ‘ಜಿಲ್ಲೆಯ ಪ್ರತಿ ಶಾಲೆ, ಕಾಲೇಜುಗಳಲ್ಲಿ ಮಾದಕ ದ್ರವ್ಯ ವಿರೋಧಿ ಸಮಿತಿ ಕಡ್ಡಾಯವಾಗಿ ರಚಿಸಬೇಕು. ಮಾದಕ ವ್ಯಸನಕ್ಕೆ ತುತ್ತಾಗದಂತೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಎಚ್ಚರಿಕೆ ನೀಡುತ್ತಿರಬೇಕು’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

‘ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆ ಕಂಡು ಬಂದಲ್ಲಿ ಬೀಟ್ ವ್ಯವಸ್ಥೆಯಲ್ಲಿರುವ ಸಿಬ್ಬಂದಿ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿ, ಗಾಂಜಾ ಸಸಿಗಳನ್ನು ನಾಶಪಡಿಸಬೇಕು. ಅರಣ್ಯ ವೀಕ್ಷಕರಿಗೆ ಮಾದಕ ವಸ್ತುಗಳ ತಡೆಗಟ್ಟುವ ಬಗ್ಗೆ ಮತ್ತು ಗಾಂಜಾ ಸಸಿ ಬೆಳೆಯದಂತೆ ನಿಗಾ ಇಡಲು ಎಚ್ಚರಿಕೆ ನೀಡಬೇಕು’ ಎಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಎನ್‌ಕಾರ್ಡ್ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ರೆಸಾರ್ಟ್ ಮತ್ತು ಹೋಮ್ ಸ್ಟೇಗಳ ಮಾಲೀಕರಿಗೆ ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆಗೆ ಅವಕಾಶ ನೀಡದ ಕುರಿತಂತೆ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೇರಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು’ ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ‘ಜಿಲ್ಲೆಗೆ ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಸ್ಥಳೀಯ ಪ್ಲೆಡ್ಲರ್‌ಗಳು ಮತ್ತು ಪ್ರವಾಸಿಗರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಕಳೆದ 9 ತಿಂಗಳಿನಲ್ಲಿ 126 ಪ್ರಕರಣ ದಾಖಲಿಸಿ 154 ಮಂದಿಯನ್ನು ಬಂಧಿಸಲಾಗಿದೆ’ ಎಂದರು.

‘ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಪ್ರಮುಖ ಸಾರ್ವಜನಿಕ ಸ್ಥಳ ಮತ್ತು ಪ್ರವಾಸಿ ತಾಣಗಳಲ್ಲಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ಮಾದಕ ವಸ್ತುಗಳ ಸೇವನೆ ಮಾಡುವವರ ಅಥವಾ ಮಾರಾಟ ಮಾಡುವವರ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ಇದ್ದರು.

ಸಮೀಕ್ಷೆ ವೇಳೆ ಗಾಂಜಾ ಪರಿಶೀಲಿಸಿ ‘ಜಿಲ್ಲೆಯಲ್ಲಿ ಕೃಷಿ ಭೂಮಿಗಳ ಮಧ್ಯದಲ್ಲಿ ಇತರ ಬೆಳೆಗಳ ಜೊತೆ ಗಾಂಜಾ ಬೆಳೆಗಳನ್ನು ಬೆಳೆಯುವ ಸಾಧ್ಯತೆ ಹೆಚ್ಚಿದೆ. ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ಗಾಂಜಾ ಬೆಳೆಯುತ್ತಿರುವ ಬಗ್ಗೆಯೂ ಪರಿಶೀಲಿಸಿ. ಗಾಂಜಾ ಸಸಿಗಳು ಪತ್ತೆಯಾದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಕಬ್ಬು ಕಟಾವಣೆ ಪ್ರಾರಂಭವಾಗಿದ್ದು ಈ ಪ್ರದೇಶಗಳಲ್ಲಿ ಕೂಡಾ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.