ಭಟ್ಕಳ: ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ಸಿಲುಕಿಕೊಂಡವರ ಮೇಲೆ ಗೋಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಭಟ್ಕಳ ಹಿಂದೂ ಜಾಗರಣಾ ವೇದಿಕೆಯಿಂದ ಶಿರಸ್ತೆದಾರ ಪ್ರವೀನ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಭಟ್ಕಳ ತಾಲ್ಲೂಕಿನಲ್ಲಿ ಅಕ್ರಮ ಗೋಸಾಗಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆಗೆ ಪರೋಕ್ಷವಾಗಿ ಸಹಕರಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ತರುತ್ತಿರುವುದು ಖಂಡನೀಯ. ತಾಲ್ಲೂಕಿನ ಚೆಕ್ ಪೋಸ್ಟಗಳನ್ನು ಬಿಗುಗೊಳಿಸಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಸಾಕಿದ ಗೋವುಗಳನ್ನು ಕಳುವು ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಅಕ್ರಮ ಗೋಸಾಗಾಟ ಮತ್ತು ಗೋ ಹತ್ಯೆಗೆ ಕಡಿವಾಣ ಹಾಕುವಲ್ಲಿ ಮುಂದಾಗಬೇಕು. ಗೋ ಸಾಗಾಟ ಮತ್ತು ಗೋ ಹತ್ಯೆ ಮಾಡುವ ಆರೋಪಿಗಳ ಮೇಲೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ನಿರ್ಧಾಕ್ಷಿಣ್ಯವಾಗಿ ಬಂಧಿಸಬೇಕು. ಗೋ ಸಾಗಾಟಗಾರರ ಮತ್ತು ಗೋ ಹಂತಕರ ಮೇಲೆ ಸಮರ್ಪಕ ಪ್ರಕರಣ ದಾಖಲಿಸದೇ ಬಂಧಿಸದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.
ಭಟ್ಕಳ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಂತ ನಾಯ್ಕ ಬೆಣಂದೂರು, ಪ್ರಮುಖರಾದ ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ, ಕುಮಾರ ನಾಯ್ಕ ಹನುಮಾನ ನಗರ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.