ADVERTISEMENT

ಸಿದ್ದಾಪುರ | ತಡೆಯಿಲ್ಲದ ಮಂಗನ ಹಾವಳಿ; ಅಡಿಕೆ ಬೆಳೆ ನಷ್ಟ

ನಷ್ಟಕ್ಕೆ ಸೂಕ್ತ ಪರಿಹಾರ ನೀಡಲು ಬೆಳೆಗಾರರ ಒತ್ತಾಯ

ರವೀಂದ್ರ ಭಟ್ಟ, ಬಳಗುಳಿ
Published 16 ಜೂನ್ 2020, 14:59 IST
Last Updated 16 ಜೂನ್ 2020, 14:59 IST
ಸಿದ್ದಾಪುರ ತಾಲ್ಲೂಕಿನ ಅಡಿಕೆ ತೋಟವೊಂದರಲ್ಲಿ ಮಂಗಗಳು ತಿಂದ ಅಡಿಕೆ ಮಿಳ್ಳೆಗಳು
ಸಿದ್ದಾಪುರ ತಾಲ್ಲೂಕಿನ ಅಡಿಕೆ ತೋಟವೊಂದರಲ್ಲಿ ಮಂಗಗಳು ತಿಂದ ಅಡಿಕೆ ಮಿಳ್ಳೆಗಳು   

ಸಿದ್ದಾಪುರ: ಅಡಿಕೆ ಮಿಳ್ಳೆ(ಬೆಳೆಯದ ಮಿಡಿ ಅಡಿಕೆ)ಗೆ ಮಂಗಗಳ ಕಾಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ರೈತರ ಪಾಲಿಗೆ ನಿವಾರಣೆಯಾಗದ ಸಮಸ್ಯೆಯಾಗಿ ಪರಿಣಮಿಸಿದೆ. ಇದರೊಂದಿಗೆ ಕೆಲ ಕಾಡುಪ್ರಾಣಿಗಳ ಹಾವಳಿಯೂ ಅಡಿಕೆ ತೋಟಕ್ಕೆ ಮಾರಕವಾಗಿವೆ.

ಕಳೆದ ಹಲವು ವರ್ಷಗಳಿಂದ ಅಡಿಕೆ ಮಿಳ್ಳೆಗಳನ್ನು ತಿನ್ನುತ್ತಿರುವ ಮಂಗಗಳು ಅಪಾರ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತಿವೆ. ಪ್ರತಿ ಅಡಿಕೆ ತೋಟದಲ್ಲಿ ಕನಿಷ್ಠವೆಂದರೂ ಶೇ 20ರಷ್ಟು ಅಡಿಕೆ ಬೆಳೆ ಮಂಗಗಳ ಪಾಲಾಗುತ್ತಿದೆ. ಇದರ ಪ್ರಮಾಣ ಕೆಲವು ಕಡೆ ಇನ್ನೂ ಎಷ್ಟೋ ಅಧಿಕವಾಗುತ್ತದೆ.

‘ಮಂಗಗಳನ್ನು ಓಡಿಸಲು ಹಲವು ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಆದರೆ ಅವುಗಳನ್ನು ತೋಟಕ್ಕೆ ಬಾರದಂತೆ ತಡೆಯುವುದು ಸಾಧ್ಯವಾಗಿಲ್ಲ’ ಎಂದು ಬಹುತೇಕ ರೈತರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

ತಾಲ್ಲೂಕಿನ ಅಡಿಕೆ ತೋಟಗಳು ಕಾಡಿನ ಅಂಚಿನಲ್ಲಿಯೇ ಇರುವುದರಿಂದ ಮಂಗಗಳ ನಿಯಂತ್ರಣ ಕಷ್ಟವಾಗಿದೆ ಎಂದು ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಬಿ.ಎಸ್. ಅಭಿಪ್ರಾಯಪಡುತ್ತಾರೆ.

‘ಅಡಿಕೆಗೆ ಬೋರ್ಡೊ ಸಿಂಪರಣೆ ಮಾಡುವಾಗ ಬೇವಿನ ಎಣ್ಣೆ ಅಥವಾ ಮೀನೆಣ್ಣೆ ಸೇರಿಸಿದರೆ ಕೆಲವು ದಿನಗಳ ಕಾಲ ಮಂಗಗಳು ಅಡಿಕೆ ಮಿಳ್ಳೆ ತಿನ್ನುವುದಿಲ್ಲ. ಆದರೆ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಜಾಸ್ತಿ ಇರುವುದರಿಂದ ಈ ಪ್ರಯೋಗವೂ ಪರಿಣಾಮ ಬೀರದೇ ಇರಬಹುದು’ ಎಂದು ಅವರು ಹೇಳಿದರು.

‘ಮಂಗಗಳ ಹಾವಳಿಯನ್ನು (ಅರಣ್ಯ ಇಲಾಖೆ) ನಿಯಂತ್ರಣ ಮಾಡಬೇಕು. ಇಲ್ಲವಾದರೇ ಅಡಿಕೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ನಾವು ಬಹಳ ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದೇವೆ’ ಎಂದು ರೈತ ಸಂಘದ ತಾಲ್ಲೂಕು ಶಾಖೆಯ ಅಧ್ಯಕ್ಷ ವೀರಭದ್ರ ನಾಯ್ಕ ವಿವರ ನೀಡಿದರು.

‘ಸರ್ಕಾರದ ಈಗಿನ ಸೂಚನೆಯ ಪ್ರಕಾರ ಪ್ರಕಾರ ಅಡಿಕೆ ಗಿಡಗಳು ಮತ್ತು ಸಸಿಗಳನ್ನು ಕಾಡು ಪ್ರಾಣಿಗಳು ಹಾಳು ಮಾಡಿದರೆ ಅದಕ್ಕೆ ಪರಿಹಾರ ನೀಡಬಹುದು. ಆದರೆ ಅಡಿಕೆ ಮಿಳ್ಳೆ ನಷ್ಟಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ್ ಶೇಖ್ ಪ್ರತಿಕ್ರಿಯೆ ನೀಡಿದರು.‌

ಕಾಡು ಹಂದಿ ಕಾಟ

ತಾಲ್ಲೂಕಿನ ಎಲ್ಲ ಕಡೆ ಮಂಗಗಳ ಹಾವಳಿಯಿಂದ ಅಡಿಕೆ ಬೆಳೆಗಾರರು ನಲುಗುತ್ತಿದ್ದರೆ, ಶಿಬಳಿ, ಹಳದೋಟದಲ್ಲಿ ಮಂಜುನಾಥ ಹೆಗಡೆ ,ಮಹಾಬಲೇಶ್ವರ ಹೆಗಡೆ ಮತ್ತು ವೆಂಕಟ್ರಮಣ ಹೆಗಡೆ ಅವರ ಅಡಿಕೆ ತೋಟದಲ್ಲಿ ಒಟ್ಟು 500 ಅಡಿಕೆ ಸಸಿ ಮತ್ತು ಬಾಳೆ ಮರಗಳನ್ನು ಕಾಡು ಹಂದಿಗಳು ಹಾಳು ಮಾಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ಅಂಕಿ–ಅಂಶ

4950 ಹೆಕ್ಟೇರ್, ಒಟ್ಟು ಅಡಿಕೆ ತೋಟ

1200 ಹೆಕ್ಟೇರ್, ವಿಸ್ತರಣೆಗೊಂಡ ಅಡಿಕೆ ತೋಟ

1500, ಒಟ್ಟು ರೈತರು

‘ಮಂಗಗಳ ಹಾವಳಿಯಿಂದ ಅಡಿಕೆ ಬೆಳೆಗೆ ಉಂಟಾದ ನಷ್ಟಕ್ಕೆ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’

ವೀರಭದ್ರ ನಾಯ್ಕ, ಅಧ್ಯಕ್ಷ, ರೈತ ಸಂಘದ ತಾಲ್ಲೂಕು ಶಾಖೆ

‘ಮಂಗಗಳಿಂದ ಅಡಿಕೆ ಮಿಳ್ಳೆ ನಷ್ಟವಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಸರ್ಕಾರದಿಂದ ನಿರ್ದೇಶನ ಬಂದರೆ ಅದಕ್ಕೆ ಪರಿಹಾರ ನೀಡುತ್ತೇವೆ’

ಅಜೀಜ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.