
ಶಿರಸಿ: ‘ಇತ್ತೀಚಿನ ದಿನಗಳಲ್ಲಿ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ತಪ್ಪು ಕಲ್ಪನೆಯನ್ನು ಬಿಂಬಿಸುವ ವ್ಯವಸ್ಥಿತ ಪ್ರಯತ್ನಗಳು ಏಷ್ಯಾಖಂಡದಾದ್ಯಂತ ನಡೆಯುತ್ತಿದ್ದು, ಇದನ್ನು ಹೋಗಲಾಡಿಸಿ ಅಡಿಕೆ ಸುರಕ್ಷಿತ ಎಂಬ ಸತ್ಯವನ್ನು ಎಲ್ಲೆಡೆ ಮನದಟ್ಟು ಮಾಡುವ ಕಾರ್ಯ ತುರ್ತಾಗಿ ಆಗಬೇಕಿದೆ’ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.
ನಗರದ ಟಿಎಸ್‌ಎಸ್ ಪ್ರಧಾನ ಕಚೇರಿ ವ್ಯಾಪಾರ ಅಂಗಳದಲ್ಲಿ ಶನಿವಾರ ಸಂಘದ ಹಿರಿಯ ನಿಷ್ಠಾವಂತ ಸದಸ್ಯರ ಸನ್ಮಾನ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪ್ರದಾನ ಮತ್ತು ಸಂಘದ ಅರ್ಹ ಸದಸ್ಯರ ಮಕ್ಕಳ ವ್ಯಾಸಂಗಕ್ಕೆ ಶಿಕ್ಷಣ ಸಹಾಯಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಅಡಿಕೆಯೊಂದಿಗೆ ತಂಬಾಕು ಸೇರಿಸಿ ಸೇವಿಸಿದಾಗ ಆಗುವ ಹಾನಿಯನ್ನು ಕೇವಲ ಅಡಿಕೆಗೆ ಆರೋಪಿಸುವುದು ಸರಿಯಲ್ಲ. ಅಡಿಕೆಯೊಂದನ್ನೇ ಸೇವಿಸುವುದರಿಂದ ಕ್ಯಾನ್ಸರ್ ಬರುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಿಪಿಸಿಆರ್‌ಐ ಮೂಲಕ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಅಡಿಕೆ ನಿಷೇಧದ ಸಂಚನ್ನು ಮೆಟ್ಟಿ ನಿಲ್ಲಲು ಅಡಿಕೆ ಸಂಘಸಂಸ್ಥೆಗಳು ದೇಶಾದ್ಯಂತ ಜನಾಭಿಪ್ರಾಯ ರೂಪಿಸಬೇಕಿದೆ’ ಎಂದು ಕರೆ ನೀಡಿದರು.
‘ಅಡಿಕೆ ಕುರಿತು 16 ಸಂಸ್ಥೆಗಳು ಸಂಶೋಧನೆ ನಡೆಸುತ್ತಿರುವ ನಡುವೆಯೇ ಅಡಿಕೆ ಭವಿಷ್ಯಕ್ಕೆ ತೂಗುಗತ್ತಿ ಎದುರಾಗುತ್ತಿದೆ. ಅಡಿಕೆಯಿಂದ ಕ್ಯಾನ್ಸರ್ ಬರದು ಎಂಬುದನ್ನು ಜಗತ್ತಿಗೆ ತೋರಿಸಬೇಕಿದೆ. ರೈತರು ಸಂಘ ಸಂಸ್ಥೆಗಳ ಮೂಲಕವೇ ತಮ್ಮ ಉತ್ಪನ್ನಗಳ ವಹಿವಾಟು ಮಾಡಬೇಕು. ತೆರಿಗೆ ಮೂಲಕ ವ್ಯವಹಾರ ನಡೆದಾಗಲಷ್ಟೇ ನಾವು ನಮ್ಮ ಹಕ್ಕು ಕೇಳಲು ಸಾಧ್ಯ’ ಎಂದರು.
‘ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡಿ ಅಡಕೆ ತೋಟಗಳಿಗೆ ತೀವ್ರ ಧಕ್ಕೆಯಾಗುತ್ತಿದೆ. ಇದರಿಂದ ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ. ಸಿದ್ದಾಪುರದ ಒಂದಷ್ಟು ಭಾಗದ ಅಡಿಕೆ ತೋಟಗಳು ಎಲೆಚುಕ್ಕೆಯಿಂದ ಬಾಧಿತವಾಗಿ ಕಣ್ಣಿರು ತರಿಸುವಂತಾಗಿದೆ. ಇದರಿಂದ ಪಾರಾಗುವುದು ಹೇಗೆ ಎಂಬ ಚಿಂತೆ ಬೆಳೆಗಾರರಲ್ಲಿ ಮೂಡಿದೆ. ರೈತ ಸದಸ್ಯ ಬೆಳೆಗಾರರಿಗೆ ಎಷ್ಟೇ ಕಷ್ಟ ಬಂದರೂ ಅವರ ಜತೆ ಸಂಸ್ಥೆ ನಿಲ್ಲಲಿದೆ’ ಎಂದು ಭರವಸೆ ನೀಡಿದರು.
ವಾಣಿಜ್ಯ ತೆರಿಗೆ ಉಪವಿಭಾಗಾಧಿಕಾರಿ ರಾಜಶೇಖರ ಮಾತನಾಡಿ, ‘ಟಿಎಸ್‌ಎಸ್ ಸಂಸ್ಥೆ ಪಾರದರ್ಶಕವಾಗಿ ವ್ಯವಹಾರ ಮಾಡುತ್ತಿದೆ. ತಿಂಗಳಿಗೆ ಸುಮಾರು ₹3–₹4 ಕೋಟಿ ತೆರಿಗೆ ತುಂಬುತ್ತಿದೆ. ಹಾಗೇ ಎಪಿಎಂಸಿ ಸೆಸ್‌ನ್ನು ಕೂಡ ಕಾಲಕಾಲಕ್ಕೆ ತುಂಬುವ ಕೆಲಸ ಮಾಡುತ್ತಿದೆ’ ಎಂದರು.
ವಾಣಿಜ್ಯ ತೆರಿಗೆ ಅಧಿಕಾರ ಮಂಜುಳಾಕ್ಷಿ ಹಾಗೂ ಟಿಎಸ್‌ಎಸ್ ನಿರ್ದೇಶಕರು ಇದ್ದರು. ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್.ಭಟ್ ತೋಟಿಮನೆ ಸ್ವಾಗತಿಸಿದರು. ಗೋಪಾಲ ಹೆಗಡೆ ನಿರೂಪಿಸಿದರು.
ಸಂಸ್ಥೆಯನ್ನು ಮುನ್ನಡೆಸಲು ಸದಸ್ಯರ ಬೆಂಬಲ ಬೇಕಾಗುತ್ತದೆ. ಸಂಸ್ಥೆ ಸದೃಢವಾಗಿದ್ದರೆ ಮಾತ್ರ ಕಾಲಕಾಲಕ್ಕೆ ಬರುವ ಕಷ್ಟಗಳನ್ನು ಎದುರಿಸಬಹುದುಗೋಪಾಲಕೃಷ್ಣ ವೈದ್ಯ ಟಿಎಸ್‌ಎಸ್ ಅಧ್ಯಕ್ಷ
ನಿಷ್ಠಾವಂತ ಸದಸ್ಯರಿಗೆ ಸನ್ಮಾನ
ಸಂಘದಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿದ 49 ಹಿರಿಯ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉತ್ತಮ ಅಂಕಗಳಿಸಿದ ಸಣ್ಣ ಹಿಡುವಳಿ ಹೊಂದಿದ ರೈತ ಸದಸ್ಯರ ಮಕ್ಕಳಿಗೆ ಧನಸಹಾಯ ನೀಡಲಾಯಿತು. ಹಾಗೇ ವರ್ತಕರು ಕಾರ್ಮಿಕರು ಹಾಗೂ ವಿಕ್ರಿ ವ್ಯವಹಾರ ಮಾಡುತ್ತಿರುವ ಸಹಕಾರ ಸಂಘಕ್ಕೆ ಇದೇ ವೇಳೆ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.