ADVERTISEMENT

ಅಡಿಕೆಗೆ ಎಲೆಚುಕ್ಕಿ: ಸಂಕಷ್ಟದತ್ತ ತೋಟಿಗರ ಬದುಕು

ಸಾಲದ ಬಡ್ಡಿ ಮನ್ನಾ, ಮರುಪಾವತಿ ಅವಧಿ ವಿಸ್ತರಣೆಗೆ ಒತ್ತಾಯ

ರಾಜೇಂದ್ರ ಹೆಗಡೆ
Published 11 ಡಿಸೆಂಬರ್ 2025, 5:17 IST
Last Updated 11 ಡಿಸೆಂಬರ್ 2025, 5:17 IST
ಅಡಿಕೆ ಎಲೆಚುಕ್ಕಿ ರೋಗಕ್ಕೆ ತುತ್ತಾಗಿರುವ ಅಡಿಕೆ ತೋಟದಲ್ಲಿ ಫಸಲು ಕುಂಠಿತವಾಗಿರುವುದು 
ಅಡಿಕೆ ಎಲೆಚುಕ್ಕಿ ರೋಗಕ್ಕೆ ತುತ್ತಾಗಿರುವ ಅಡಿಕೆ ತೋಟದಲ್ಲಿ ಫಸಲು ಕುಂಠಿತವಾಗಿರುವುದು    

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಅಡಿಕೆ ಕೊಯ್ಲು ಹಂಗಾಮು ಆರಂಭವಾಗಿದ್ದು, ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಕ್ಷೇತ್ರಗಳಲ್ಲಿ ಇಳುವರಿ ತೀವ್ರ ಕುಸಿತ ಕಂಡುಬಂದಿದೆ. ಇದರಿಂದ ಕೃಷಿಗಾಗಿ ಮಾಡಿದ ಸಾಲ ಭಾರವಾಗುತ್ತಿದ್ದು, ಅಪಾರ ಪ್ರಮಾಣದ ಫಸಲು ನಷ್ಟ, ತೋಟಕ್ಕೆ ಆದ ಹಾನಿಯ ಕಾರಣಕ್ಕೆ ಸಾಲದ ಬಡ್ಡಿ ಮನ್ನಾ, ಮರುಪಾವತಿ ಅವಧಿ ವಿಸ್ತರಿಸುವ ಬೇಡಿಕೆ ತೋಟಿಗರ ವಲಯದಿಂದ ವ್ಯಕ್ತವಾಗಿದೆ. 

ಮೇ ತಿಂಗಳ 2ನೇ ವಾರದಲ್ಲಿ ಆರಂಭವಾದ ಮಳೆ ಸುಮಾರು 5 ತಿಂಗಳು ನಿರಂತರ ಸುರಿದ ಪರಿಣಾಮ ಅಡಿಕೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದರ ಜತೆ ಎಲೆಚುಕ್ಕಿ, ಕೊಳೆರೋಗದ ದೆಸೆಯಿಂದ ಫಸಲು ನಷ್ಟವಾಗಿದ್ದು, ರೈತರ ಬದುಕಿಗೆ ದಿಕ್ಕಿಲ್ಲದಂತಾಗಿದೆ. ‘ಅಡಿಕೆ ಫಸಲು ಇಳುವರಿ ನಷ್ಟವಾಗಿದ್ದು, ತೂಕವನ್ನೂ ಕಳೆದುಕೊಂಡಿದೆ. ವಿಪರೀತ ಮಳೆ, ಎಲೆಚುಕ್ಕಿ ನಿಯಂತ್ರಣಕ್ಕೆ ಮಿತಿ ಮೀರಿದ ರಾಸಾಯನಿಕ ಔಷಧ ಬಳಕೆ, ಎರಡ್ಮೂರು ವರ್ಷಗಳಿಂದ ಬದಲಾದ ಬೇಸಾಯ ಪದ್ಧತಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಂದಾಜು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ಬಾಧಿಸುತ್ತಿದ್ದು, ಪ್ರತಿ ತೋಟದಲ್ಲಿ ಶೇ 40ಕ್ಕಿಂತ ಹೆಚ್ಚು ಇಳುವರಿ ಕುಸಿತವಾಗಿದೆ. ಕೆಲವೆಡೆಯಂತೂ ಎಲೆಚುಕ್ಕಿ ರೋಗ ಅಡಿಕೆ ಮರಕ್ಕೂ ಮಾರಣಾಂತಿಕವಾಗಿ ಕಾಡುತ್ತಿದೆ’ ಎನ್ನುತ್ತಾರೆ ಬೆಳೆಗಾರರು. 

‘ಕಳೆದ ವರ್ಷ 800ರಷ್ಟು ಅಡಿಕೆ ಮರ ಎಲೆಚುಕ್ಕಿ ರೋಗಕ್ಕೆ ಬಲಿಯಾಗಿತ್ತು. ಈ ವರ್ಷ ಈಗಾಗಲೇ 200ರಷ್ಟು ಮರ ಕಡಿಯಲಾಗಿದೆ. ಈ ಹಿಂದೆ 40 ಕ್ವಿಂಟಲ್ ಬೆಳೆಯುತ್ತಿದ್ದ ತೋಟದಲ್ಲಿ ಈ ಬಾರಿ ಫಸಲು ಕಾಣುವ ಮರಗಳು ಸಿಗುವುದೇ ಅಪರೂಪ ಎಂಬಂತಾಗಿದೆ. ಮರಗಳ ಚಂಡೆ ಕಳಚಿ ಬೀಳುತ್ತಿವೆ’ ಎನ್ನುತ್ತಾರೆ ಹೆಬ್ರೆ ಗ್ರಾಮದ ಎಸ್.ಎಸ್.ಹೆಗಡೆ.

ADVERTISEMENT

‘ಅತಿ ಹೆಚ್ಚು ಮಳೆ ಸುರಿಯುವ ನೆಗ್ಗು, ಸಂಪಖಂಡ ಹೋಬಳಿ, ಬಂಡಲ, ಸಣ್ಣಗದ್ದೆ, ಸಿದ್ದಾಪುರ ತಾಲ್ಲೂಕಿನ ಹಳ್ಳಿಬೈಲ್, ಕೊಡಮೂಡು, ಮರಾಠಿಕೊಪ್ಪ, ಮನ್ಮನೆ, ಯಲ್ಲಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ಎರಡು ಮೂರು ವರ್ಷಗಳಿಂದ ಈ ರೋಗ ಇರುವ ಕಡೆಗಳಲ್ಲಿ ಅಡಿಕೆ ಬೆಳೆ ಸಂಪೂರ್ಣ ಕುಸಿದಿದೆ. ಎಲೆಚುಕ್ಕಿ ಬಾಧಿತ ಅಡಿಕೆ ತೋಟಗಳಲ್ಲಿ ಕಳೆದ ವರ್ಷದ ಇಳುವರಿಗೆ ಹೋಲಿಸಿದರೆ ಈ ವರ್ಷ ಶೇ 40ರಷ್ಟು ಕುಸಿತವಾಗಿದೆ’ ಎನ್ನುತ್ತಾರೆ ನೇರ್ಲವಳ್ಳಿಯ ಅಡಿಕೆ ಬೆಳೆಗಾರ ಎಂ.ಎನ್.ಹೆಗಡೆ. 

ಅಡಿಕೆ ಬೆಳೆ ಮೇಲೆ ಎಲೆಚುಕ್ಕಿ ರೋಗ ಗಂಭೀರ ಪರಿಣಾಮ ಬೀರುತ್ತಿದ್ದು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಕಷ್ಟದಲ್ಲಿರುವ ರೈತರ ಕೈಹಿಡಿಯಬೇಕು.
ರಾಘವೇಂದ್ರ ನಾಯ್ಕ ಕಿರವತ್ತಿ, ರೈತ ಸಂಘದ ರಾಜ್ಯ ಕಾರ್ಯದರ್ಶಿ

‘ಅಡಿಕೆ ತೋಟ ಅಭಿವೃದ್ಧಿ, ಕೊಳೆರೋಗ, ಎಲೆಚುಕ್ಕಿ ರೋಗ ನಿರ್ವಹಣೆಗೆ ಮಾಡಿದ ಖರ್ಚು ಸಾಕಷ್ಟಾಗಿದೆ. ಉತ್ತಮ ದರವಿದೆ ಎಂದು ಕಂಡುಬಂದರೂ ಫಸಲೇ ಇಲ್ಲದೆ ದರ ಸಿಗಲಾರದು. ಬಹುತೇಕ ಸಣ್ಣ ಹಿಡುವಳಿದಾರರು ಸಾಲ ಮಾಡಿ ಕೃಷಿ ಕಾರ್ಯ ಮಾಡುತ್ತಿರುವ ಕಾರಣ ಮುಂದಿನ ಜೀವನ ಹೇಗೆಂಬ ಆತಂಕ ಮನೆ ಮಾಡಿದೆ. ಹೀಗಾಗಿ ಸದ್ಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಜತೆ ಮರುಪಾವತಿ ಅವಧಿ ವಿಸ್ತರಣೆಗೆ ಸರ್ಕಾರ ಕ್ರಮವಹಿಸಬೇಕು’ ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಆಗ್ರಹವಾಗಿದೆ. 

ಪರಿಣಾಮಕಾರಿ ಔಷಧ ಪತ್ತೆ ಮಾಡಿಲ್ಲ

‘ರೋಗ ನಿಯಂತ್ರಣಕ್ಕೆ ಬಳಸಬಹುದಾದ ಔಷಧಗಳ ಪತ್ತೆಗೆ ಕೇಂದ್ರ ರಾಜ್ಯ ಸರ್ಕಾರಗಳು ವರ್ಷದ ಹಿಂದೆ ಶಿರಸಿಯ ನೇರ್ಲಹದ್ದದ ತೋಟದ ಸ್ಥಳ ಪರಿಶೀಲನೆಗೆ ಕಳುಹಿಸಿದ್ದ ವಿಜ್ಞಾನಿಗಳ ತಂಡ ಈವರೆಗೂ ಪರಿಣಾಮಕಾರಿ ಔಷಧ ಪತ್ತೆ ಮಾಡಿಲ್ಲ. ಈ ವರ್ಷ ವಿಪರೀತದ ಹಂತಕ್ಕೆ ಮಟ್ಟಿದೆ. ತಜ್ಞ ವಿಜ್ಞಾನಿಗಳ ತಂಡದಿಂದ ರೋಗಕ್ಕೆ ಕಾರಣವಾಗುತ್ತಿರುವ ಅಂಶ ಪರಿಹಾರ ಕ್ರಮಗಳ ಕುರಿತು ಸ್ಪಷ್ಟ ಉತ್ತರ ಸಿಕ್ಕಿಲ್ಲ’ ಎಂಬುದು ಅಡಿಕೆ ಬೆಳೆಗಾರರ ದೂರಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.