ADVERTISEMENT

ಅರಬ್ಬಿ ಸಮುದ್ರಕ್ಕೆ ಇಳಿಯಲಿವೆ ‘ಕೃತಕ ಬಂಡೆ’

ಮೀನು ಸಂತತಿ ಹೆಚ್ಚಿಸುವ ಉದ್ದೇಶ: ಸಾಂಪ್ರದಾಯಿಕ ಮೀನುಗಾರರಿಗೆ ಆಶಾಭಾವ

ಮೋಹನ ನಾಯ್ಕ
Published 9 ಮಾರ್ಚ್ 2024, 0:08 IST
Last Updated 9 ಮಾರ್ಚ್ 2024, 0:08 IST
ಕೃತಕ ಬಂಡೆಗಳನ್ನು ಸಮುದ್ರಕ್ಕೆ ಹಾಕಲು ದೋಣಿಯಲ್ಲಿ ಇರಿಸಿರುವುದು
ಕೃತಕ ಬಂಡೆಗಳನ್ನು ಸಮುದ್ರಕ್ಕೆ ಹಾಕಲು ದೋಣಿಯಲ್ಲಿ ಇರಿಸಿರುವುದು   

ಭಟ್ಕಳ: ಮೀನುಗಳ ಉತ್ಪತ್ತಿಗೆ ಪೂರಕವಾಗಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ‘ಕೃತಕ ಬಂಡೆ’ಗಳನ್ನು ಸ್ಥಾಪಿಸುವ ಯೋಜನೆಗೆ ಶನಿವಾರ ಇಲ್ಲಿನ ಬೆಳಕೆಯಲ್ಲಿ ಚಾಲನೆ ಸಿಗಲಿದೆ.

ಕೆಲ ವರ್ಷಗಳಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮ ಎದುರಾಗಿದೆ. ಬೆಳಕಿನ ಮೀನುಗಾರಿಕೆ, ಬುಲ್ ಟ್ರಾಲ್ ಸೇರಿ ಅವೈಜ್ಞಾನಿಕ ಪದ್ಧತಿಯ ಮೀನುಗಾರಿಕೆಯಿಂದ ಸಾಂಪ್ರದಾಯಿಕ ರೀತಿ ಮೀನುಗಾರಿಕೆ ನಡೆಸುವವರಿಗೆ ಮೀನು ಸಿಗುತ್ತಿಲ್ಲ. ಅಂತಹವರ ಅನುಕೂಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮೀನುಗಾರಿಕೆ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ 25 ಕಡೆ ಮತ್ತು ಉಡುಪಿಯ 31 ಕಡೆ ಸೇರಿ ಸೇರಿ ಒಟ್ಟು 56 ಸ್ಥಳಗಳಲ್ಲಿ ‘ಕೃತಕ ಬಂಡೆ’ಗಳನ್ನು ಇಟ್ಟು ಮೀನು ಸಂತತಿ ಹೆಚ್ಚಿಸುವ ಉದ್ದೇಶ ಹೊಂದಿದೆ.

‘₹17 ಕೋಟಿ ವೆಚ್ಚದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುವ ಸ್ಥಳದಲ್ಲಿ, ಸಮುದ್ರದ ದಡದಿಂದ 4 ರಿಂದ 5 ನಾಟಿಕಲ್ ಮೈಲು ದೂರದಲ್ಲಿ ಬಂಡೆಗಳನ್ನು ಇರಿಸಲಾಗುತ್ತದೆ. ಭಟ್ಕಳದ ಮುರ್ಡೇಶರ್ವರದಲ್ಲಿ ಬಂಡೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಬಂಡೆ ಸರಾಸರಿ 400 ರಿಂದ 500 ಕೆಜಿ ತೂಕವಿದ್ದು, ಕ್ರೇನ್ ನೆರವಿನೊಂದಿಗೆ ಮರಳಿನ ತಳಪಾಯವಿರುವ ಕಡೆ ಬಿಡಲಾಗುತ್ತದೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ತಿಳಿಸಿದರು.

ADVERTISEMENT

‘ಕೃತಕ ಬಂಡೆಗಳ ಸ್ಥಾಪನೆಯಿಂದ ಅಪರೂಪದ ಮೀನಿನ ಸಂತತಿಗಳ ಉಳಿವಿಗೆ ಸಹಕಾರಿ ಆಗಲಿದೆ. ಮೀನಿನ ಸಂತಾನೋತ್ಪತ್ತಿ ಪೂರಕ ವಾತಾವರಣ ಸಿಕ್ಕರೆ, ಆಳ ಸಮುದ್ರದ ಮೀನುಗಳು ತೀರಕ್ಕೆ ಸಮೀಪದ ಪ್ರದೇಶಕ್ಕೆ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಇದರಿಂದ ಮೀನುಗಾರರಿಗೂ ಅನುಕೂಲವಾಗುತ್ತದೆ’ ಎಂದು ಮೀನುಗಾರ ಮುಖಂಡ ದಿವಾಕರ ಮೊಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃತಕ ಬಂಡೆಗಳು ಸಿದ್ಧವಾಗಿರುವುದು
ನಾಡದೋಣಿ ಮೀನುಗಾರರ ಆರ್ಥಿಕ ಸಂಕಷ್ಟ ಅರಿತು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈಗಾಗಲೇ ತಮಿಳುನಾಡಿನಲ್ಲಿ ಈ ಯೋಜನೆ ಯಶಸ್ವಿಯಾಗಿದೆ.
ಮಂಕಾಳ ವೈದ್ಯ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.