ADVERTISEMENT

ಸುರಕ್ಷತೆ, ವೇತನ ನಿಗದಿಗೆ ಆಗ್ರಹ

ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತೆಯರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 16:45 IST
Last Updated 29 ಜುಲೈ 2020, 16:45 IST
ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಧರಣಿ ನಡೆಸಿದರು
ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಧರಣಿ ನಡೆಸಿದರು   

ಕಾರವಾರ: ತಿಂಗಳಿಗೆ ₹12 ಸಾವಿರ ವೇತನ ನಿಗದಿ ಮಾಡುವುದು, ಕೋವಿಡ್ ಸೋಂಕಿತ ಆಶಾ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ, ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ಕಾರ್ಮಿಕ ಸಂಘಟನೆಯ (ಎ.ಐ.ಯು.ಟಿ.ಯು.ಸಿ) ನೇತೃತ್ವದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೂರಾರು ಸದಸ್ಯೆಯರು ಕೆಲಸ ಸ್ಥಗಿತಗೊಳಿಸಿ 20 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಹೋರಾಟ ಮುಂದುವರಿಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಗೌರವ ಸಲಹೆಗಾರ ಗಂಗಾಧರ ಬಡಿಗೇರ್, ‘ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರನ್ನು ಕೊರೊನಾ ಮೊದಲ ಸಾಲಿನ ಯೋಧರು ಎಂದು ಕೇವಲ ಹೊಗಳಿಕೆಗಳಿಂದಲೇ ಅವರ ಹೊಟ್ಟೆ ತುಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಇವರ ಸಮಸ್ಯೆಗಳನ್ನು ಈಡೇರಿಸದ ಸರ್ಕಾರ ಕುರುಡಾಗಿ ವರ್ತಿಸುತ್ತಿದೆ’ ಎಂದು ದೂರಿದರು.

ADVERTISEMENT

‘ಆಶಾ ಕಾರ್ಯಕರ್ತೆಯರ ಚಳವಳಿಯು ಜನರ ಹೋರಾಟವಾಗಿ ಪರಿವರ್ತನೆಗೊಂಡಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಈ ಹೋರಾಟವನ್ನು ಬೆಂಬಲಿಸಿದ್ದಾರೆ. ಸರ್ಕಾರವು ಈ ಕೂಡಲೇ ಸ್ಪಂದಿಸಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರವು ಆಶಾ ಕಾರ್ಯಕರ್ತೆಯರ ಜೊತೆ ನಡೆಸುವ ಮಾತುಕತೆಯ ಆಧಾರದಲ್ಲಿ ಚಳವಳಿಯ ಭವಿಷ್ಯ ನಿಂತಿದೆ. ಒಂದು ವೇಳೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಇನ್ನಷ್ಟು ಗಟ್ಟಿಯಾಗಿ ಮುಂದಿನ ಹಂತದ ಹೋರಾಟವನ್ನು ಸಂಘಟಿಸಲಾಗುವುದು’ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾ ಚಲವಾದಿ ಮಾತನಾಡಿ, ‘ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮನವಿ ಸ್ವೀಕರಿಸಿದರು.

ಸಂಘಟನೆಯ ಜಂಟಿ ಕಾರ್ಯದರ್ಶಿ ಕವಿತಾ ಗಾವಡ, ಮುಖಂಡರಾದ ಪ್ರೇಮಾ ದಿಂಡವಾರ, ಕಾರ್ಮಲ್ ಇನ್ ರಾಜ್, ಸಂಧ್ಯಾ ವಾಗ್ಲೆ, ಪ್ರಭಾಮಣಿ ಶೆಟ್ಟಿ, ರೇಷ್ಮಾ ಗಾವಡೆ, ಚೇತನಾ, ಶ್ವೇತಾ ಕಾಪಡ್ಕರ್, ಮೋಹಿನಿ ನಾಯ್ಕ, ಕಮಲಾಕ್ಷಿ ನಾಯ್ಕ, ಸಹನಾ ಬಾಂದೇಕರ್, ಸಂಗೀತಾ ಪೆಡ್ನೇಕರ್, ಸುಮಲತಾ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.