ADVERTISEMENT

ಕಾರವಾರ | ಕೆಲಸ ಸ್ಥಗಿತಗೊಳಿಸಿದ ಆಶಾ ಕಾರ್ಯಕರ್ತರು; ಹೋರಾಟ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 14:10 IST
Last Updated 22 ಜುಲೈ 2020, 14:10 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಕಾರವಾರದಲ್ಲಿ ಬುಧವಾರ ಫಲಕಗಳನ್ನು ‍ಪ್ರದರ್ಶಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಕಾರವಾರದಲ್ಲಿ ಬುಧವಾರ ಫಲಕಗಳನ್ನು ‍ಪ್ರದರ್ಶಿಸಿದರು   

ಕಾರವಾರ: ತಿಂಗಳಿಗೆ ₹ 12 ಸಾವಿರ ಗೌರವಧನ ನೀಡಬೇಕು, ಕೋವಿಡ್‌ ಸೋಂಕಿನಿಂದ ರಕ್ಷಣೆಗೆ ಪರಿಕರಗಳನ್ನು ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಸ್ಥಗಿತ ಹೋರಾಟ ಮುಂದುವರಿದಿದೆ ಎಂದುರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಚೇತನಾ ಎಂ ಕೊಚರೇಕರ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಜೂನ್ 30ರಿಂದ ವಿವಿಧ ಹಂತಗಳಲ್ಲಿಹೋರಾಟ ನಡೆಸಲಾಗುತ್ತಿದೆ. ಆದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಹಾಗಾಗಿಜುಲೈ 10ರಿಂದ ಸಂಪೂರ್ಣವಾಗಿ ಕೆಲಸ ಸ್ಥಗಿತಗೊಳಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಈ ಹೋರಾಟ ಆರಂಭವಾಗಿ10 ದಿನಗಳು ಕಳೆದರೂ ರಾಜ್ಯ ಸರ್ಕಾರ ಮಾತುಕತೆಗೆ ಮುಂದಾಗಿಲ್ಲ’ ಎಂದು ಬೇಸರ ಬೇಸರಿಸಿದರು.

ADVERTISEMENT

‘ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಶಾ ಕಾರ್ಯಕರ್ತೆಯರ ತಿಂಗಳ ಗೌರವಧನವನ್ನು ₹ 10 ಸಾವಿರಕ್ಕೆಹೆಚ್ಚಿಸುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಮಾತಿನಂತೆ ಅವರು ನಡೆದುಕೊಂಡಿಲ್ಲ.ಇನ್ನೊಂದು ಕಡೆ, ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್‌ಲೈನ್ಪೋರ್ಟಲ್‌ನಲ್ಲಿ ದಾಖಲಿಸಲು ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವ ನೆಪದಲ್ಲಿ ವಿಳಂಬ ನೀತಿಯಿಂದಾಗಿ 2018ಮತ್ತು 2019ರಲ್ಲಿ ಸುಮಾರು 15 ತಿಂಗಳು ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ ₹ 15 ಸಾವಿರದಿಂದ ₹ 25 ಸಾವಿರದಷ್ಟು ಹಣ ಬರಲೇ ಇಲ್ಲ’ ಎಂದು ದೂರಿದರು.

‘ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶರಾಜ್ಯಗಳಲ್ಲಿ ತಿಂಗಳಿಗೆ ₹10 ಸಾವಿರ ಗೌರವಧನ ನಿಗದಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಶ್ವೇತಾ ಎಲ್ ಕಪಡಸ್ಕರ್ ಹಾಗೂ ಇತರ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.