ADVERTISEMENT

ಮಂಗನಕಾಯಿಲೆ ಪ್ರದೇಶಕ್ಕೆ ತಜ್ಞರ ಕಳುಹಿಸುವ ಭರವಸೆ

ಮುಖ್ಯಮಂತ್ರಿ ಭೇಟಿ ಮಾಡಿದ ಅನಂತ ಅಶೀಸರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 14:45 IST
Last Updated 23 ಏಪ್ರಿಲ್ 2020, 14:45 IST

ಶಿರಸಿ: ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಅವರು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮಂಗನ ಕಾಯಿಲೆ ಕುರಿತು ಸಂಶೋಧನೆಗೆ ಒತ್ತು ನೀಡುವಂತೆ ವಿನಂತಿಸಿದರು.

ಮಂಗಕಾಯಿಲೆ ರೋಗದ ವೈರಾಣುಗಳ ಮೂಲ ಅಕರ ಪ್ರಾಣಿಗಳು ಹಾಗೂ ಪ್ರಸರಣಾ ವಿಧಾನಗಳ ಕುರಿತು ಇಂದಿಗೂ ಮಾಹಿತಿ ಕಡಿಮೆಯಿದೆ. ಸೋಂಕು ವಿಜ್ಞಾನ, ರೋಗನಿಧಾನ ವಿಜ್ಞಾನ ಹಾಗೂ ಪರಿಸರ ವಿಜ್ಞಾನ ತಜ್ಞರ ಮೂಲಕ ವಿಸ್ತೃತವಾದ ಅಧ್ಯಯನ ಕೈಗೊಳ್ಳುವ ಅಗತ್ಯವಿದೆಯೆಂದು ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯೂ ಸೇರಿದಂತೆ ಅನೇಕ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ, ರೋಗಪೀಡಿತ ಪ್ರದೇಶಗಳ ಕಾಡು ಹಾಗೂ ಸಾಕುಪ್ರಾಣಿಗಳ ದೇಹದ್ರವ್ಯಗಳ ನಮೂನೆಗಳನ್ನು ಪರೀಕ್ಷಿಸಬೇಕಾಗಿದೆ (ಉದಾಹರಣೆಗೆ– ಹಂದಿ, ಮುಳ್ಳುಹಂದಿ, ಅಳಿಲು, ಇಲಿ, ಹೆಗ್ಗಣ, ಮೊಲದಂಥ ಕಾಡು ಪ್ರಾಣಿಗಳು ಹಾಗೂ ನಾಯಿ, ಬೆಕ್ಕು, ಆಕಳು, ಎಮ್ಮೆಯಂಥ ಸಾಕುಪ್ರಾಣಿಗಳು) ಎಂದು ಅವರು ಮುಖ್ಯಮಂತ್ರಿಗೆ ನೀಡಿರುವ ಮನವಿಯಲ್ಲಿ ಶಿಫಾರಸು ಮಾಡಿದ್ದಾರೆ.

ರೋಗಪೀಡಿತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಳ್ಳಿಗಾಡು ಪ್ರದೇಶಗಳಿಗೆ, ತಜ್ಞರ ತಂಡ ಭೇಟಿ ನೀಡಿ, ಈ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ಕೈಗೊಳ್ಳಬೇಕು. ಇದು ವೈರಾಣುವಿನ ಮೂಲ ಕಂಡುಹಿಡಿಯಲು ಸಹಾಯಮಾಡಬಲ್ಲದು. ರೋಗ ತೀವ್ರವಾಗಿರುವ ಈ ಸಂದರ್ಭದಲ್ಲಿಯೇ ಪರೀಕ್ಷೆ ನಡೆಸಬೇಕು ಎಂದು ವಿನಂತಿಸಿದರು.

ADVERTISEMENT

ತುರ್ತಾಗಿ ತಜ್ಞರ ತಂಡವನ್ನು ಕಾಯಿಲೆಪೀಡಿತ ಪ್ರದೇಶಗಳಿಗೆ ಕಳುಹಿಸುವಂತೆ ಮುಖ್ಯಮಂತ್ರಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ನಂತರ ವೈದ್ಯಕೀಯ ಸಚಿವ ಡಾ.ಸುಧಾಕರ, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಪಾಂಡೆ ಅವರಿಗೆ ಮಾಹಿತಿ ನೀಡಲಾಯಿತು ಎಂದು ಅಶೀಸರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.