ADVERTISEMENT

ಸಕಾರತ್ಮಕ ವರದಿಗಾರಿಕೆಗೆ ಭವಿಷ್ಯ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 15:49 IST
Last Updated 25 ಆಗಸ್ಟ್ 2019, 15:49 IST
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಿ.ಎಸ್.ಸದಾನಂದ ಹಾಗೂ ಅಶೋಕ ಹಾಸ್ಯಗಾರ ಅವರಿಗೆ ’ಮಾಧ್ಯಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಿ.ಎಸ್.ಸದಾನಂದ ಹಾಗೂ ಅಶೋಕ ಹಾಸ್ಯಗಾರ ಅವರಿಗೆ ’ಮಾಧ್ಯಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಶಿರೆಸಿ: ಪತ್ರಕರ್ತನ ವಿಶ್ವಾಸಾರ್ಹತೆ ಸಮಾಜದಲ್ಲಿ ಶಾಶ್ವತವಾಗಿಲು ಸಕಾರಾತ್ಮಕ ವರದಿಗಾರಿಕೆ ರೂಢಿಸಿಕೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಿ.ಎಸ್.ಸದಾನಂದ ಹಾಗೂ ಅಶೋಕ ಹಾಸ್ಯಗಾರ ಅವರಿಗೆ ’ಮಾಧ್ಯಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿ, ಅವರು ಮಾತನಾಡಿದರು. ನಕಾರಾತ್ಮಕ ಸುದ್ದಿಗಳು, ರೋಚಕ ಸುದ್ದಿಗಳು ರೋಚಕ ಸುದ್ದಿಗಳು ಕ್ಷಣಿಕ ಪ್ರಚಾರ ತಂದುಕೊಡಬಹುದು. ಆದರೆ, ಸಮಾಜಕ್ಕೆ ವಾಸ್ತವದ ಅರಿವಾದಾಗ ಅದನ್ನು ಬರೆದ ಪತ್ರಕರ್ತನ ಭವಿಷ್ಯ ಕರಾಳವಾಗಬಹುದು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ಸಂಸ್ಕೃತಿ ಬೆಳೆಸುವಲ್ಲಿ ಪತ್ರಿಕೋದ್ಯಮದ ಪಾತ್ರ ದೊಡ್ಡದು. ಪತ್ರಿಕೋದ್ಯಮ ಕ್ಷೇತ್ರವನ್ನು ಸದ್ಭಾವನೆಯಿಂದ ಸ್ವೀಕರಿಸುವುದು ಕೂಡ ದೊಡ್ಡ ಜವಾಬ್ದಾರಿಯಾಗಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಾವು ಹೆಚ್ಚಿಸಿಕೊಂಡಾಗ ಪತ್ರಿಕಾ ಕ್ಷೇತ್ರದ ಮೇಲೆ ವಿನಾಕಾರಣ ಆರೋಪಿಸುವ ಸ್ವಭಾವ ಕಡಿಮೆಯಾಗಬಹುದು ಎಂದು ಹೇಳಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿದ ಪಿ.ಎಸ್.ಸದಾನಂದ ಮಾತನಾಡಿ, ‘ಪತ್ರಿಕೆಗೆ ಇರುವ ಸಾಮಾಜಿಕ ಜವಾಬ್ದಾರಿ, ದೂರದೃಷ್ಟಿ ಅರಿತು ಪತ್ರಕರ್ತರು ಕೆಲಸ ಮಾಡಬೇಕು. ಪತ್ರಕರ್ತರಿಗೆ ವಾಸ್ತವ ಎದುರಿಸುವ ನಿ಼ಷ್ಠುರತೆ ಇರಬೇಕು.’ ಎಂದರು. ಅಶೋಕ ಹಾಸ್ಯಗಾರ ಮಾತನಾಡಿ, ‘ಸಮಾಜ ಪತ್ರಿಕೆಗಳ ಮೇಲೆ ವಿಶ್ವಾಸ ಇಟ್ಟಿರುವ ಸಂದರ್ಭದಲ್ಲಿ ಪತ್ರಕರ್ತರು ಕರ್ತವ್ಯವೇ ಧರ್ಮವೆಂದು ತಿಳಿದು ಕೆಲಸ ಮಾಡಬೇಕು’ ಎಂದರು.

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ, ಪತ್ರಕರ್ತ ಸುಬ್ರಾಯ ಭಟ್ಟ ಬಕ್ಕಳ, ತಾಲ್ಲೂಕು ಘಟಕದ ಕಾರ್ಯದರ್ಶಿ ಸಂದೇಶ ಭಟ್ಟ ಇದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ್ ಸ್ವಾಗತಿಸಿದರು. ಉದಯಕುಮಾರ ಕಾನಳ್ಳಿ ನಿರೂಪಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು. ಚಿತ್ರಕಲಾವಿದ ಜಿ.ಎಂ.ತಾರಗೋಡ ಅವರು ಪ್ರಶಸ್ತಿ ಪುರಸ್ಕೃತರಿಗೆ ಚಿತ್ರ ಬಿಡಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.