ADVERTISEMENT

3 ಆಯುಷ್ಮಾನ್ ಕೇಂದ್ರಕ್ಕೆ ರಾಷ್ಟ್ರೀಯ ಪ್ರಮಾಣ ಪತ್ರ

ಆರೋಗ್ಯ ಸೇವೆ, ಸೌಕರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ತಂಡ

ಗಣಪತಿ ಹೆಗಡೆ
Published 2 ಡಿಸೆಂಬರ್ 2025, 2:37 IST
Last Updated 2 ಡಿಸೆಂಬರ್ 2025, 2:37 IST
ಕುಮಟಾ ತಾಲ್ಲೂಕಿನ ಲುಕ್ಕೇರಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಎನ್‌ಕ್ಯೂಎಎಸ್ ತಂಡವು ಭೇಟಿ ನೀಡಿತ್ತು.
(ಸಂಗ್ರಹ ಚಿತ್ರ)
ಕುಮಟಾ ತಾಲ್ಲೂಕಿನ ಲುಕ್ಕೇರಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಎನ್‌ಕ್ಯೂಎಎಸ್ ತಂಡವು ಭೇಟಿ ನೀಡಿತ್ತು. (ಸಂಗ್ರಹ ಚಿತ್ರ)   

ಕಾರವಾರ: ಗ್ರಾಮೀಣ ಭಾಗದಲ್ಲಿ ಆರೋಗ್ಯ ರಕ್ಷಣೆಗೆ ಪರಿಣಾಮಕಾರಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 3 ಉಪ ಆರೋಗ್ಯ ಕೇಂದ್ರಗಳು (ಆಯುಷ್ಮಾನ್ ಆರೋಗ್ಯ ಕೇಂದ್ರ) ರಾಷ್ಟ್ರೀಯ ಗುಣಮಟ್ಟದ ಮಾನದಂಡ ಪ್ರಮಾಣ ಪತ್ರ ಪಡೆಯಲು ಅರ್ಹತೆ ಪಡೆದುಕೊಂಡಿವೆ.

ಕುಮಟಾ ತಾಲ್ಲೂಕಿನ ಕೋಡ್ಕಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲುಕ್ಕೇರಿ ಆಯುಷ್ಮಾನ್ ಆರೋಗ್ಯ ಕೇಂದ್ರ, ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗುಡ್ನಾಪುರದ ಆಯುಷ್ಮಾನ್ ಆರೋಗ್ಯ ಕೇಂದ್ರ, ಹಳಿಯಾಳ ತಾಲ್ಲೂಕಿನ ತಢರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುತ್ತಲಮುರಿ ಆಯುಷ್ಮಾನ್ ಆರೋಗ್ಯ ಕೇಂದ್ರ ಈ ಅರ್ಹತೆಗೆ ಆಯ್ಕೆಯಾಗಿದೆ.

‘ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡದ (ಎನ್‌ಕ್ಯುಎಎಸ್) ಅಡಿಯಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಾರ್ಯನಿರ್ವಹಣೆ, ಸ್ಥಿತಿಗತಿಗಳನ್ನು ಆಧರಿಸಿ ನಡೆಸಿದ ಪರಿಶೀಲನೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿ ಗುಣಮಟ್ಟದ ಮಾನದಂಡ ಪ್ರಮಾಣ ಪತ್ರ ನೀಡಲು 3 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದರು.

ADVERTISEMENT

‘ಜಿಲ್ಲೆಯ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಆರೋಗ್ಯ ಕೇಂದ್ರ ಸೇರಿ 392 ಕೇಂದ್ರಗಳನ್ನು ಎನ್‌ಕ್ಯೂಎಎಸ್‌ ಪ್ರಮಾಣ ಪತ್ರಕ್ಕೆ ಆಯ್ಕೆ ಮಾಡುವ ಗುರಿ ಹೊಂದಲಾಗಿದೆ. ಆದರೆ, ಈವರೆಗೆ ಕೇವಲ 55 ಕೇಂದ್ರಗಳು ಮಾತ್ರವೇ ಅರ್ಜಿ ಸಲ್ಲಿಕೆಗೆ ಅರ್ಹತೆ ಪಡೆದಿವೆ’ ಎಂದರು.

‘ಆರಂಭಿಕ ಹಂತದ ಪರಿಶೀಲನೆ ವೇಳೆ ಗುಡ್ನಾಪುರ ಮತ್ತು ಲುಕ್ಕೇರಿ ಕೇಂದ್ರಗಳು ಮಾತ್ರವೇ ಆಯ್ಕೆಯಾಗಿದ್ದವು. ಬಳಿಕ ಅಕ್ಟೋಬರ್‌ನಲ್ಲಿ ಪರಿಶೀಲನೆಗೆ ಬಂದಿದ್ದ ಎನ್‌ಕ್ಯೂಎಎಸ್ ಪರಿಶೀಲನೆಯ ಕೇಂದ್ರ ತಂಡವು ಮುತ್ತಲಮುರಿ ಕೇಂದ್ರದ ಸ್ಥಿತಿಗತಿಯನ್ನೂ ಪರಿಶೀಲಿಸಿದ್ದು, ಅಲ್ಲಿನ ವ್ಯವಸ್ಥೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಮೂರು ಕೇಂದ್ರಗಳನ್ನು ಆಯ್ಕೆ ಮಾಡಿದೆ’ ಎಂದು ತಿಳಿಸಿದರು.

‘ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಗುಣಮಟ್ಟವನ್ನು ಬಾಹ್ಯಸಂಸ್ಥೆಯ ಮೂಲಕ ಪರಿಶೀಲನೆ ಮಾಡುವ ವ್ಯವಸ್ಥೆ ಮೊದಲಿನಿಂದ ಜಾರಿಯಲ್ಲಿದೆ. ಈ ಹಿಂದೆ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಮಾತ್ರ ಈ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇತ್ತು. ಕಳೆದ ವರ್ಷದಿಂದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರಗಳನ್ನೂ ಈ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅದಕ್ಕಾಗಿ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಆಯಾ ಕೇಂದ್ರದವರು ಸ್ವಯಂ ವಿಶ್ಲೇಷಣೆ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ರಾಜ್ಯ ಹಾಗೂ ಕೇಂದ್ರ ತಂಡಗಳಿಂದ ಪರಿಶೀಲನೆ ನಡೆಸಿ ಗುಣಮಟ್ಟ ಪ್ರಮಾಣಪತ್ರವನ್ನು ಒದಗಿಸಲಾಗುತ್ತದೆ’ ಎಂದು ವಿವರಿಸಿದರು.

ರಾಷ್ಟ್ರೀಯ ಗುಣಮಟ್ಟದ ಮಾನದಂಡ ಪ್ರಮಾಣ ಪತ್ರ ಪಡೆಯಲು ಅರ್ಹತೆ ಪಡೆದುಕೊಂಡಿರುವ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಮುಂದಿನ 3 ವರ್ಷದವರೆಗೆ ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ ತಲಾ ₹1.5 ಲಕ್ಷ ವಿಶೇಷ ಅನುದಾನ ಸಿಗಲಿದೆ ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

ಯಾವೆಲ್ಲ ಮಾನದಂಡ? ‘ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಳ ಬಗ್ಗೆ ಜಾಗೃತಿ ಮತ್ತು ಅವುಗಳ ನಿಯಂತ್ರಣ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಲಸಿಕೆಗಳು ಆರೋಗ್ಯಕರ ಜೀವನ ಶೈಲಿ ಮತ್ತು ಶೋಧನೆ ಗಂಭೀರ ಕಾಯಿಲೆಗಳ ನೋವು ನಿವಾರಣೆ ಮತ್ತು ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಮುಖ್ಯ ಉದ್ದೇಶ. ಈ 7 ಅಂಶಗಳನ್ನು ಸಮರ್ಪಕವಾಗಿ ಜಾರಿಗೆ ತಂದ ಕೇಂದ್ರಗಳನ್ನು ರಾಷ್ಟ್ರೀಯ ಗುಣಮಟ್ಟದ ಮಾನದಂಡ ಪ್ರಮಾಣ ಪತ್ರಕ್ಕೆ ಆಯ್ಕೆ ಮಾಡಲಾಗುತ್ತದೆ. ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳು ಪ್ರಮಾಣ ಪತ್ರಕ್ಕೆ ಆಯ್ಕೆಯಾಗುವ ಅರ್ಹತೆ ಪಡೆದಿರುತ್ತವೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.