ಕುಮಟಾ: ಅವಧಿಪೂರ್ವ ಸುರಿದ ಬಿರುಸಿನ ಮಳೆಯಿಂದಾಗಿ ತಾಲ್ಲೂಕಿನ ಅಘನಾಶಿನಿ ಹಿನ್ನೀರು ಗಜನಿಗಳಲ್ಲಿ ಬೆಳೆದ ನೈಸರ್ಗಿಕ ಸಿಗಡಿ, ಮೀನು ಲಭ್ಯತೆ ಇಳಿಕೆಯಾಗಿದೆ.
ಹಿನ್ನೀರು ಗಜನಿಗಳಲ್ಲಿ ಮಳೆಗಾಲದ ಆರಂಭದಲ್ಲಿ ಅಪಾರ ಪ್ರಮಾಣದ ಏಡಿ, ಸಿಗಡಿ ಮೀನು ಹಿಡಿಯುವ ಲೆಕ್ಕಾಚಾರದಲ್ಲಿದ್ದ ಮೀನುಗಾರರಿಗೆ ಜೂನ್ ಮೊದಲ ವಾರದಲ್ಲೇ ಸುರಿದ ಮಳೆ ಕೈಕೊಟ್ಟಿದೆ. ಭಾರಿ ಮಳೆಗೆ ಗಜನಿಯಲ್ಲಿ ಬೆಳೆದಿದ್ದ ಮೀನುಗಳು ಅಘನಾಶಿನಿ ನದಿ ಪಾಲಾಗಿವೆ.
ಪ್ರತಿ ವರ್ಷ ಜೂನ್ ಮೊದಲ ವಾರದ ಮಳೆಯ ಆರಂಭದೊಂದಿಗೆ ಗಜನಿಯ ಕಿಂಡಿ ಅಣೆಕಟ್ಟೆಗೆ ಬಲೆ ಕಟ್ಟುವುದನ್ನು ನಿಲ್ಲಿಸಿ ಮೀನು ಹಿಡಿಯಲು ಗುತ್ತಿಗೆ ಪಡೆದವರು ಮೀನುಗಾರರ ಮೂಲಕ ಗಜನಿಯಲ್ಲಿ ಬಲೆ ಬೀಸಿ ಮೀನು ಹಿಡಿಸುತ್ತಿದ್ದರು. ಈ ಪ್ರಕ್ರಿಯೆ ಜೂನ್ ಕೊನೆ ವಾರದವರೆಗೂ ನಡೆದು ಹೇರಳ ಮೀನು, ಸಿಗಡಿ, ಏಡಿಯಿಂದ ಉತ್ತಮ ಲಾಭ ಸಿಗುತ್ತಿತ್ತು.
‘ಇನ್ನೇನು ಬಲೆ ಬೀಸಿ ಮೀನು ಹಿಡಯಬೇಕೆನ್ನುವಾಗ ಮೀನು, ಏಡಿ ಮಳೆನೀರಿನ ಮೂಲಕ ನದಿ ಸೇರಿವೆ. ಬಿಸಿಲಿಗೆ ಒಣಗಿಸಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದ ಸಣ್ಣ ಸಿಗಡಿಯನ್ನು ಮಳೆಯ ಕಾರಣದಿಂದ ವಾಪಸು ನದಿಗೆ ಚೆಲ್ಲಲಾಗಿದೆ. ಮೀನು ಪ್ರಿಯರಿಗೂ ಒಂದು ತಿಂಗಳು ತಾಜಾ ಮೀನು ಸವಿಯುವ ಅವಕಾಶ ಸಿಗುತ್ತಿತ್ತು. ಈ ಬಾರಿ ಅವಕಾಶ ಕೈತಪ್ಪಿದೆ’ ಎನ್ನುತ್ತಾರೆ ಮೀನು ಗುತ್ತಿಗೆ ಪಡೆಯುತ್ತಿದ್ದವರು.
‘ಮೇ ತಿಂಗಳ ಜೋರು ಬಿಸಿಲಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುವ ಸಣ್ಣ ಸಿಗಡಿ ಒಣಗಿಸಿ ಮಾರಾಟ ಮಾಡುತ್ತಿದ್ದೆವು. ಹೇರಳ ಪ್ರಮಾಣದಲ್ಲಿ ಸಿಕ್ಕ ಸಣ್ಣ ಸಿಗಡಿ ಒಣಗಿಸಲು ಬಿಸಿಲಿಲ್ಲದೆ ಅವುಗಳನ್ನು ಕಡಿಮೆ ದರಕ್ಕೆ ಮಾರಬೇಕಾಯಿತು’ ಎಂದು ತುಂಬ್ಲೆಕಟ್ಟಾ ಗಜನಿಯ ಸುಬ್ರಾಯ ನಾಯ್ಕ ಹೇಳಿದರು.
- ಮೀನು ರಾಶಿ ನದಿಗೆ ಚೆಲ್ಲಬೇಕಾಯಿತು
‘ಗಜನಿ ಕಿಂಡಿ ಅಣೆಕಟ್ಟೆಗೆ ಬಲೆ ಕಟ್ಟಿದರೆ ಹಿಂದೆಲ್ಲ ಹೇರಳ ಪ್ರಮಾಣದಲ್ಲಿ ಸಿಗುತ್ತಿದ್ದ ಕುರುಡೆ ಕೆಂಸ ಕಾಗಳಸಿ ಹಾಲುಗೊಕ್ಕರ ಮೀನು ಈ ವರ್ಷ ಲಭ್ಯವಾಗಲೇ ಇಲ್ಲ. ಬದಲಾಗಿ ಬಿಳಿ ಸಿಗಡಿ ಟೈಗರ್ ಸಿಗಡಿ ಮಾತ್ರ ಸಿಕ್ಕವು. ಮಳೆ ಆರಂಭವಾದಾಗ ಒಂದೆರಡು ದಿನ ಮಾತ್ರ ದೊಡ್ಡ ಗಾತ್ರದ ಕುರುಡೆ ಕಾಗಳಸಿ ಸಿಕ್ಕವು. ಮಳೆ ಬಿರುಸಾದಾಗ ಬಲೆ ಬೀಸಲು ಸಾಧ್ಯವಾಗದೆ ಮೀನೆಲ್ಲ ನದಿ ಪಾಲಾದವು. ಸುಮಾರು ಒಂದು ಟನ್‌ನಷ್ಟು ಸಣ್ಣ ಸಿಗಡಿ ಒಣಗಿಸಲು ಬಿಸಿಲು ಬಾರದೆ ಎಲ್ಲವನ್ನು ನದಿಗೆ ಚೆಲ್ಲಬೇಕಾಯಿತು’ ಎಂದು ಮಾಣಿಕಟ್ಟಾ ಗಜನಿಯ ಆನಂದು ಹರಿಕಂತ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.