ADVERTISEMENT

ಅಡಿಕೆ ಹಾಳೆ ಉತ್ಪನ್ನ ನಿಷೇಧ: ಕೇಂದ್ರ ಮಧ್ಯಪ್ರವೇಶಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:29 IST
Last Updated 1 ಜೂನ್ 2025, 12:29 IST
ಅಡಿಕೆ ಹಾಳೆಯಿಂದ ತಯಾರಿಸಿದ ವೃತ್ತಾಕಾರದ ಪ್ಲೇಟ್‌ಗಳು
ಅಡಿಕೆ ಹಾಳೆಯಿಂದ ತಯಾರಿಸಿದ ವೃತ್ತಾಕಾರದ ಪ್ಲೇಟ್‌ಗಳು   

ಕಾರವಾರ: ‘ಭಾರತದಿಂದ ರಫ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳ ಮೇಲೆ ಅಮೆರಿಕ ಹೇರಿದ ನಿಷೇಧ ತೆರವುಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ನಿಷೇಧ ಆದೇಶ ತೆರವುಗೊಳಿಸಲು ಮುಂದಾಗಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಒತ್ತಾಯಿಸಿದ್ದಾರೆ.

‘ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್‌ಕಾರಕ ಎಂಬ ಕಾರಣ ನೀಡಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಅಡಿಕೆ ಹಾಳೆಯ ಉತ್ಪನ್ನಗಳನ್ನು ನಿಷೇಧಿಸಿದ್ದು, ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದ್ದಾರೆ.

‘ದೇಶದಲ್ಲೇ ಅತಿ ದೊಡ್ಡ ಅಡಿಕೆ ಬೆಳೆ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು, ಈ ನಿರ್ಬಂಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಈ ಉದ್ಯಮದಲ್ಲಿ ತೊಡಗಿರುವ ಸಹಸ್ರಾರು ಜನರ ಉದ್ಯೋಗದ ಮೇಲೆ ದುಷ್ಪರಿಣಾಮ ಬೀಳಲಿದೆ. ಎಲೆ ಚುಕ್ಕಿ ರೋಗ, ಕೊಳೆ ರೋಗ, ಬೆಲೆ ಕುಸಿತದ ಸಮಸ್ಯೆ ಅನುಭವಿಸಿ ಸತತ ನಷ್ಟದ ನಂತರ ಈ ವರ್ಷ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿ ಇರುವಾಗಲೇ ಇಂತಹ ನಿರ್ಬಂಧ ಅಡಿಕೆ ಬೆಳೆಗಾರರನ್ನು ಕಷ್ಟಕ್ಕೆ ಸಿಲುಕಿಸುತ್ತಿದೆ. ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ, ಅಡಿಕೆ ಬೆಳೆಯುವ ಪ್ರದೇಶದ ಸಂಸದರು ಪ್ರಧಾನಿ ಮೇಲೆ ಈ ತೊಡಕು ನಿವಾರಿಸುವಂತೆ ಒತ್ತಡ ತರಬೇಕು’ ಎಂದ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.