ADVERTISEMENT

ಬನವಾಸಿಯಲ್ಲಿ ಪಂಪನನ್ನು ಶಾಶ್ವತವಾಗಿಡಲು ಸರ್ಕಾರ ಬದ್ಧ: ಸಚಿವ ಶಿವರಾಜ ತಂಗಡಗಿ

ಬನವಾಸಿಯಲ್ಲಿ ಕದಂಬೋತ್ಸವಕ್ಕೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:37 IST
Last Updated 12 ಏಪ್ರಿಲ್ 2025, 15:37 IST
ಶಿರಸಿಯ ಬನವಾಸಿಯಲ್ಲಿ ಕದಂಬೋತ್ಸವವನ್ನು ಸಚಿವ ಶಿವರಾಜ ತಂಗಡಗಿ ಶನಿವಾರ ಚಾಲನೆ ಉದ್ಘಾಟಿಸಿದರು
ಶಿರಸಿಯ ಬನವಾಸಿಯಲ್ಲಿ ಕದಂಬೋತ್ಸವವನ್ನು ಸಚಿವ ಶಿವರಾಜ ತಂಗಡಗಿ ಶನಿವಾರ ಚಾಲನೆ ಉದ್ಘಾಟಿಸಿದರು   

ಶಿರಸಿ (ಮಯೂರವರ್ಮ ವೇದಿಕೆ): ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲು ಜಿಲ್ಲಾಡಳಿತ ಪ್ರಸ್ತಾವ ಕಳುಹಿಸಿದರೆ ಹಂತ ಹಂತವಾಗಿ ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.

ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಆರಂಭವಾದ ಎರಡು ದಿನ ದಿನಗಳ ಪ್ರಸಿದ್ಧ ಕದಂಬೋತ್ಸವ ಉದ್ಘಾಟಿಸಿ ಹಾಗೂ ಪಂಪ ಪ್ರಶಸ್ತಿ ಪ್ರದಾನ ಮಾಡಿ  ಮಾತನಾಡಿದರು.

ಮನುಷ್ಯ ಜಾತಿ ತಾನೊಂದೇ ವಲಂ ಎಂದು ಸಮಾಜ ಕಟ್ಟಿರುವ ಪಂಪನನ್ನು ಶಾಶ್ವತವಾಗಿಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಂಪ ಭವನ ನಿರ್ಮಿಸಲು ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿ ಕ್ರಮವಹಿಸಲಾಗುವುದು ಎಂದರು. 

ADVERTISEMENT

'ಬನವಾಸಿಯಲ್ಲಿ ಪಂಪ ವನ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಅದರ ಸಮಗ್ರ ಅಭಿವೃದ್ಧಿಗೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ನೀಡಲಾಗುವುದು. ಇಲ್ಲಿನ ಹಿಂದುಳಿದ ವರ್ಗದ ವಸತಿ ನಿಲಯಕ್ಕೆ ಹಣ ನೀಡಲಾಗುವುದು' ಎಂದರು. 

'ಬನವಾಸಿಯಲ್ಲಿ ಕದಂಬೋತ್ಸವ ಆಚರಣೆ ಮಾಡುವುದು ಔಚಿತ್ಯವಾಗಿದೆ. ಈ ಪರಂಪರೆಯನ್ನು ಮುಂದುವರೆಸಲಾಗುವುದು' ಎಂದರು.  

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, 'ಕದಂಬೋತ್ಸವ ನಿರಂತರವಾಗಿ ನಡೆಯಲಿದೆ. ಆ ಮೂಲಕ ಬನವಾಸಿ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲಿದೆ' ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬನವಾಸಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಇನ್ನಷ್ಟು ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು' ಎಂದರು.  

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ ಸೈಲ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಕೆ.ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್  ಮುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯಿಷಾ ಇತರರಿದ್ದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ, ಸ್ವಾಗತಿಸಿದರು. ದಿವ್ಯಾ ಆಲೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.