ADVERTISEMENT

ಬನವಾಸಿಯನ್ನು ತಾಲ್ಲೂಕಾಗಿ ಸರ್ಕಾರ ಘೋಷಿಸಲಿ: ಪಾಟೀಲ ಪುಟ್ಟಪ್ಪ ಆಗ್ರಹ

‘ಪಂಪ ಮಹಾಕವಿ ಸುತ್ತಮುತ್ತ’ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 13:11 IST
Last Updated 13 ಅಕ್ಟೋಬರ್ 2018, 13:11 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ‘ಚುಟುಕು ಗಂಗಾವಳಿ’ ಚುಟುಕು ಸಂಕಲನವನ್ನು ಸಾಹಿತಿ ಪಾಟೀಲ ಪುಟ್ಟಪ್ಪ ಬಿಡುಗಡೆಗೊಳಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ‘ಚುಟುಕು ಗಂಗಾವಳಿ’ ಚುಟುಕು ಸಂಕಲನವನ್ನು ಸಾಹಿತಿ ಪಾಟೀಲ ಪುಟ್ಟಪ್ಪ ಬಿಡುಗಡೆಗೊಳಿಸಿದರು   

ಬನವಾಸಿ: ರಾಜ್ಯ ಸರ್ಕಾರಕ್ಕೆ ಇತಿಹಾಸದ ಬಗ್ಗೆ ಗೌರವವಿದ್ದರೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ತಾಲ್ಲೂಕನ್ನಾಗಿ ಘೋಷಿಸಬೇಕು ಎಂದು ಸಾಹಿತಿ ಪಾಟೀಲ ಪುಟ್ಟಪ್ಪ ಆಗ್ರಹಿಸಿದರು.

ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಶನಿವಾರ ಆಯೋಜಿಸಿದ್ದ ‘ಪಂಪ ಮಹಾಕವಿ ಸುತ್ತಮುತ್ತ’ ವಿಚಾರಗೋಷ್ಠಿ ಉದ್ಘಾಟಿಸಿ, ಅವರು ಮಾತನಾಡಿದರು. ಪಂಪ ಎಲ್ಲಿ ಹುಟ್ಟಿದ್ದು ಎಂಬುದು ಮುಖ್ಯವಲ್ಲ. ಪಂಪನ ಮೂಲದ ಬಗೆಗಿನ ವಾದ ಅಪ್ರಸ್ತುತ. ಬನವಾಸಿ ಪ್ರದೇಶದಲ್ಲಿ ಆತನ ಸಾಹಿತ್ಯ ಏಳ್ಗೆಯಾಗಿದೆ ಎಂಬುದು ಸತ್ಯ ಸಂಗತಿ. ಬನವಾಸಿಯೇ ಪಂಪನ ನೆಲೆವೀಡು. ಪಂಪ ಪ್ರಶಸ್ತಿ ವಿತರಣೆಗೆ ಯೋಗ್ಯ ಸ್ಥಳ ಬನವಾಸಿ ಎಂದರು.

‘ಐತಿಹಾಸಿಕ ಮಹತ್ವವಿರುವ ಬನವಾಸಿ ಹಾಗೂ ರಾಷ್ಟ್ರಕೂಟರ ರಾಜಧಾನಿ ಮಾಳಖೇಡ ಈ ಎರಡೂ ಸ್ಥಳಗಳು ತಾಲ್ಲೂಕಾಗಬೇಕು. ಶತಾಯಗತಾಯ ಇದು ಆಗಲೇಬೇಕು. ನಾನು ಮೊದಲಿನಿಂದಲೂ ಇದನ್ನು ಪ್ರತಿಪಾದಿಸುತ್ತ ಬಂದಿದ್ದೇನೆ. ಕನ್ನಡಿಗರ ಭಾವನೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಗ್ರ ಕನ್ನಡ ನಾಡು ಬನವಾಸಿಯ ಹಿಂದಿದೆ’ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ, ಕರಾವಳಿ ಕವಿಗಳ ಚುಟುಕು ಸಂಕಲನ ‘ಚುಟುಕು ಗಂಗಾವಳಿ’, ಜಿ.ಎ.ಹೆಗಡೆ ಸೋಂದಾ ಬರೆದ ‘ಹೈಕುಗಳು’, ಸಿದ್ದೇಶ್ವರ ಹಿರೇಮಠ ಅವರ ‘ಸಾಹಸದ ನಿಧಿ’, ‘ಕವನ ಸಂಭ್ರಮ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಹೊಳೆಮಠದ ನಾಗಭೂಷಣ ಸ್ವಾಮೀಜಿ, ಮಧುಕೇಶ್ವರ ದೇವಾಲಯದ ಅಧ್ಯಕ್ಷ ರಾಜಶೇಖರ ಒಡೆಯರ್, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಶಿವಣ್ಣ ಬೆಳ್ಳದ ಇದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಶಂಕರ ಕುಂಬಿ ಸ್ವಾಗತಿಸಿದರು. ಸಂಘದ ಸದಸ್ಯ ಶಿವಾನಂದ ಬಾವಿಕಟ್ಟಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಬನವಾಸಿ ಮಧುಕೇಶ್ವರ ದೇವಾಲಯ, ಕದಂಬ ಸೈನ್ಯ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.