ಶಿರಸಿ: ಬೇಡ್ತಿ ವರದಾ ನದಿ ಜೋಡಣೆ ವಿಷಯ ಅನೇಕ ವರ್ಷಗಳಿಂದಲೂ ಪ್ರಸ್ತಾಪ ಆಗುತ್ತಲೇ ಇದೆ. ಆದರೆ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಇಲ್ಲಿಯವರೆಗೂ ಚರ್ಚೆಯಾಗುತ್ತಲೇ ಇದೆ. ಮುಂದೆಯೂ ಚರ್ಚೆಯಲ್ಲೇ ಮುಗಿಯುತ್ತದೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡ್ತಿ ವರದಾ ನದಿ ಜೋಡಣೆ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಸಿಎಂ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ಬಾರ, ಅವರೊಂದಿಗೆ ಯೋಜನೆ ಸಾಧಕಬಾಧಕಗಳ ಬಗ್ಗೆ ಚರ್ಚಿಸುತ್ತೇನೆ. ಈ ವರೆಗೂ ಡಿಪಿ ಆರ್ ಸಿದ್ಧವಾಗಿಲ್ಲ. ಯೋಜನಾ ವರದಿ ಸಿದ್ಧವಾಗಿರುವ ಎಷ್ಟೋ ಯೋಜನೆಗಳು ಜಾರಿಯಾಗದೇ ಇರುವುದು ನಮ್ಮ ಮುಂದೆ ಇದೆ. ಇನ್ನು ಈ ಯೋಜನೆ ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಗೆ ಮಾರಕವಾಗಲಿದೆ. ಜನರನ್ನು ಕತ್ತಲೆಯಲ್ಲಿಟ್ಟು ಯೋಜನೆ ಸರ್ಕಾರಗಳು ಕಾರ್ಯಗತಗೊಳಿಸುವುದು ಸೂಕ್ತವಲ್ಲ ಎಂದರು.
ಮಳೆ ಮಾಪನ ಯಂತ್ರಗಳ ರಿಪೇರಿಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್ ಕೊಟ್ಟಿದ್ದು, ರಿಪೇರಿ ಕಾರ್ಯವೂ ನಡೆಯುತ್ತಿದೆ. ಮಳೆ ಮಾಪನ ಕೇಂದ್ರ ಸರಿ ಆಗಬೇಕು, ಆದರೆ, ಮಳೆ ಮಾಪನ ಯಂತ್ರವೊಂದೇ ಬೆಳೆ ವಿಮೆಗೆ ಆಧಾರ ಎಂಬುದು ಸರಿಯಲ್ಲ. ಕಳೆದ ವರ್ಷ ಈ ಯಂತ್ರಗಳ ಸಮಸ್ಯೆ ಇದ್ದರೂ ಅಂತಿಮವಾಗಿ ಒತ್ತಡಕ್ಕೆ ಮಣಿದು ಪರಿಹಾರ ಬಿಡುಗಡೆಗೊಳಿಸಿದೆ. ಹೀಗಾಗಿ, ಈ ವರ್ಷ ಸಮಸ್ಯೆ ಆಗಲಾರದು ಎಂಬ ಆಶಾಭಾವವಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.