ಶಿರಸಿ: ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಕುರಿತು ಪರಿಸರ ತಜ್ಞರ ಸ್ವತಂತ್ರ ವರದಿ ಪ್ರಕಟವಾಗಿದ್ದು, ವೈಜ್ಞಾನಿಕ ಆಧಾರಗಳು, ಕಾಯ್ದೆಗಳ ಬೆಂಬಲದ ಜತೆ ಅಂಹಿಸಾತ್ಮಕ ಮಾರ್ಗದಲ್ಲಿ ಈ ಯೋಜನೆ ತಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾಗಿರುವ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘1992ರ ಬೇಡ್ತಿ ಪಾದಯಾತ್ರೆಯಿಂದ ಆರಂಭಿಸಿ ಇಲ್ಲಿಯವರೆಗೆ ನಿರಂತರ ಬೇಡ್ತಿ ಅಘನಾಶಿನಿ ಸಂರಕ್ಷಣಾ ಜನಾಂದೋಲನ ನಡೆಸಿದ್ದೇವೆ. ಪ್ರಸ್ತುತ ಸಂಘಟನಾತ್ಮಕವಾಗಿ ಮತ್ತೆ ಹೋರಾಟ ನಡೆಸಬೇಕಿದೆ’ ಎಂದರು.
ಸಭೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಪಶ್ಚಿಮ ಘಟ್ಟಕ್ಕೆ ಮಾರಕ. ಬೇಡ್ತಿ ನದಿ ಕಣಿವೆಯ ಹಾಗೂ ರೈತರು, ವನವಾಸಿಗಳ ವಿನಾಶಕ್ಕೆ ಕಾರಣವಾಗಲಿದೆ. ಬೇಡ್ತಿಯಲ್ಲಿ ಬೇಸಿಗೆಯಲ್ಲಿ ನೀರೇ ಇರುವುದಿಲ್ಲ. ಬೇಡ್ತಿ ಕಣಿವೆಯ 1.5 ಲಕ್ಷ ಜನರಿಗೆ, ರೈತರಿಗೆ ನೀರುಣಿಸಲು ನೀರು ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರ ಬೇಡ್ತಿ-ವರದಾ ಯೋಜನೆಯ ತಯಾರಿ ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಒಕ್ಕೊರಲ ಆಗ್ರಹ ಮಾಡಲಾಯಿತು.
ಸಂಸದರು, ಶಾಸಕರು ಈ ಬಗ್ಗೆ ನಿಯೋಗ ಕೊಂಡೊಯ್ದು ರಾಜ್ಯ, ಕೇಂದ್ರ ಸರ್ಕಾರಕ್ಕೆ ಅಹವಾಲು ಸಲ್ಲಿಸಿ ಯೋಜನೆ ಕೈ ಬಿಡುವಂತೆ ಮನದಟ್ಟು ಮಾಡಬೇಕು. ಶಿರಸಿ, ಯಲ್ಲಾಪುರ ತಾಲ್ಲೂಕುಗಳ ರೈತ ಸಹಕಾರಿ ಸಂಘಗಳ ವಾರ್ಷಿಕ ಸಭೆಯಲ್ಲಿ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ರದ್ದು ಮಾಡಿ ಎಂಬ ನಿರ್ಣಯ ಸ್ವೀಕರಿಸಬೇಕು’ ಎಂದು ನಿರ್ಣಯ ಸ್ವೀಕರಿಸಲಾಯಿತು. ಜತೆ, ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯನ್ನು ಪುನರ್ ರಚನೆ ಮಾಡಲು ಸಭೆ ನಿರ್ಧರಿಸಿತು.
ವಿಜ್ಞಾನಿಗಳಾದ ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ, ನರಸಿಂಹ ವಾನಳ್ಳಿ, ಪ್ರಮುಖರಾದ ವಿ.ಎನ್.ಹೆಗಡೆ, ಅನಂತ ಅಶೀಸರ, ವೆಂಕಟೇಶ ನಾಯ್ಕ, ಸದಾನಂದ ಭಟ್, ರಮಾಕಾಂತ ಮಂಡೆಮನೆ, ಹರಿಪ್ರಕಾಶ ಕೋಣೆಮನೆ, ಶ್ರೀಪಾದ ಶಿರನಾಲ, ಉಮೇಶ ಭಾಗ್ವತ್, ವಿ.ಆರ್ ಹೆಗಡೆ, ನರಸಿಂಹ ಸಾತೊಡ್ಡಿ, ಅನಂತಮೂರ್ತಿ ಹೆಗಡೆ, ಡಾ.ಜಿ.ವಿ.ಹೆಗಡೆ, ಗಣಪತಿ ಬಿಸಲಕೊಪ್ಪ, ನಾರಾಯಣ ಗಡಿಕೈ, ಆರ್.ಎಸ್.ಹೆಗಡೆ ಭೈರುಂಬೆ, ನರಸಿಂಹ ಭಟ್, ಶಂಭು ಪಟಗಾರ, ವಿಶ್ವನಾಥ ಗೌಡ, ಸುರೇಶ ಹಕ್ಕಿಮನೆ, ಎನ್.ಜಿ.ಭಟ್ರಕೇರಿ ಮುಂತಾದವರು ಪಾಲ್ಗೊಂಡರು. ಅನಂತ ಭಟ್ ನಿರ್ಣಯ ಮಂಡಿಸಿದರು. ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ವಂದಿಸಿದರು.
ಸರ್ಕಾರದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಸಮಗ್ರ ಯೋಜನಾ ವರದಿ (ಡಿ.ಪಿ.ಆರ್) ತಯಾರಿ ಹಂತದಲ್ಲಿ ಇದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದ್ದು ಈಗಿಂದಲೇ ಜನಾಂದೋಲನ ರೂಪಿಸಲಾಗುವುದುಅನಂತ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ
ಸಮಿತಿಯ ಭವಿಷ್ಯದ ನಡೆ
‘ಅಕ್ಟೋಬರ್ ತಿಂಗಳಲ್ಲಿ ಪಟ್ಟಣದ ಹೊಳೆ ಸಹಸ್ರಲಿಂಗ ಹಾಗೂ ಬೇಡ್ತಿ ನದಿ ಸೇತುವೆಯ ಬಳಿಯ ಸುರಮನೆ ಈ ಮೂರು ಸ್ಥಳಗಳಿಗೆ ಬೇಡ್ತಿ ಸಮಿತಿಯ ಕಾರ್ಯಕರ್ತರು ಸ್ಥಳೀಯ ಜನ ಭೇಟಿ ನೀಡಿ ಸಭೆ ನಡೆಸಬೇಕು. ನವೆಂಬರ್ ತಿಂಗಳಲ್ಲಿ ಶಿರಸಿಯಲ್ಲಿ ವಿಜ್ಞಾನಿಗಳ ಜತೆ ಪಶ್ಚಿಮಘಟ್ಟದ ವಿನಾಶಕಾರಿ ಬೃಹತ್ ಯೋಜನೆಗಳು ವಿಶೇಷವಾಗಿ ನದಿ ತಿರುವು ಯೋಜನೆಗಳ ಬಗ್ಗೆ ವಿಚಾರ ಸಂಕಿರಣ ನಡೆಸಬೇಕು. 2026ರ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಬೇಕು’ ಎಂದು ಒಕ್ಕೋರಲ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.