ADVERTISEMENT

ಕಾರವಾರ | ಸ್ವಯಂ ಉದ್ಯೋಗ ಯೋಜನೆ: 24 ಗುರಿ 757 ಅರ್ಜಿ!

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:05 IST
Last Updated 24 ಜನವರಿ 2024, 14:05 IST
ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಿಂದ ನೀಡುವ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಆಯ್ಕೆಗೆ ಮುನ್ನ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅರ್ಜಿದಾರರ ಜತೆ ಸಮಾಲೋಚನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಿಂದ ನೀಡುವ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಆಯ್ಕೆಗೆ ಮುನ್ನ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅರ್ಜಿದಾರರ ಜತೆ ಸಮಾಲೋಚನೆ ನಡೆಸಿದರು.   

ಕಾರವಾರ: ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡುವ ವಿವಿಧ ಯೋಜನೆ ಸೌಲಭ್ಯ ಪಡೆಯಲು ನೂರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದ ಕಾರಣ ಅರ್ಜಿದಾರರ ಸಮ್ಮುಖದಲ್ಲಿಯೇ ಚೀಟಿ ಎತ್ತಿ ಫಲಾನುಭವಿಗಳನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆಯ್ಕೆ ಮಾಡಿದರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಕಳೆದ ಎರಡು ದಿನಗಳಿಂದ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಮೊದಲ ಬಾರಿಗೆ ಖುದ್ದು ಜಿಲ್ಲಾಧಿಕಾರಿ ಎಲ್ಲ ಅರ್ಜಿದಾರರ ಮನವೊಲಿಸಿ ಅವರ ಸಮ್ಮುಖದಲ್ಲಿಯೇ ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ 24 ಮಂದಿಗೆ ₹1 ಲಕ್ಷದವರೆಗೆ ಸಹಾಯಧನದಲ್ಲಿ ಸಾಲ ಸೌಲಭ್ಯ ಒದಗಿಸುವ ಯೋಜನೆಯಲ್ಲಿ ಜಿಲ್ಲೆಗೆ 24 ಗುರಿ ನೀಡಲಾಗಿದ್ದರೆ ಬರೋಬ್ಬರಿ 757 ಅರ್ಜಿಗಳು ಸಲ್ಲಿಕೆಯಾಗಿದ್ದವು. ₹2 ಲಕ್ಷ ಸಹಾಯಧನ ಒದಗಿಸುವ ಉದ್ಯಮಶೀಲತಾ ಯೋಜನೆಗೆ 9 ಗುರಿಗೆ 338 ಅರ್ಜಿ, ₹4 ಲಕ್ಷ ಸಾಲ ನೀಡುವ ಸ್ವಾವಲಂಬಿ ಸಾರಥಿ ಯೋಜನೆಗೆ 7 ಗುರಿಗೆ 185 ಅರ್ಜಿ ಸಲ್ಲಿಕೆಯಾಗಿದ್ದವು.

ADVERTISEMENT

‘ನಿಗದಿತ ಗುರಿಗಿಂತ ಹಲವು ಪಟ್ಟು ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. 2022–23 ಮತ್ತು 2023–24ನೇ ಸಾಲಿನ ಫಲಾನುಭವಿಗಳ ಆಯ್ಕೆ  ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ನಡೆಸಲಾಯಿತು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದ ಟ್ಯಾಕ್ಸಿ, ಗೂಡ್ಸ್ ಸಹಾಯಧನ ಯೋಜನೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 511 ಅರ್ಜಿಗಳು, ಪ್ಯಾಸೆಂಜರ್ ಆಟೋರಿಕ್ಷಾ ಸಹಾಯಧನ ಯೋಜನೆಯಡಿ ಸಲ್ಲಿಕೆಯಾಗಿದ್ದ 141 ಅರ್ಜಿಗಳನ್ನು ಪರಿಶೀಲಿಸಿ 10 ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.