ADVERTISEMENT

ಪುಸ್ತಕ ಎಲ್ಲರನ್ನು ತಲುಪಲಿ: ಸಾಹಿತಿ ನಾ.ಡಿಸೋಜ

'ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು' ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 14:26 IST
Last Updated 14 ಫೆಬ್ರುವರಿ 2020, 14:26 IST
ಸಿದ್ದಾಪುರದ ಶಂಕರ ಮಠದಲ್ಲಿ ಶುಕ್ರವಾರ ಭಾರತಿ ಹೆಗಡೆ ಅವರ ‘ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು’ ಪುಸ್ತಕನ್ನು ಹಿರಿಯ ಸಾಹಿತಿ ನಾ.ಡಿಸೋಜ ಬಿಡುಗಡೆಗೊಳಿಸಿದರು
ಸಿದ್ದಾಪುರದ ಶಂಕರ ಮಠದಲ್ಲಿ ಶುಕ್ರವಾರ ಭಾರತಿ ಹೆಗಡೆ ಅವರ ‘ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು’ ಪುಸ್ತಕನ್ನು ಹಿರಿಯ ಸಾಹಿತಿ ನಾ.ಡಿಸೋಜ ಬಿಡುಗಡೆಗೊಳಿಸಿದರು   

ಸಿದ್ದಾಪುರ: ‘ಯಾವುದೇ ಪುಸ್ತಕದ ಓದು ಕೇವಲ ಒಬ್ಬರಿಗೆ ಮೀಸಲು ಆಗಬಾರದು. ಒಬ್ಬರು ಓದಿದ ನಂತರ ಅದು ಎಲ್ಲರಿಗೂ ತಲುಪಬೇಕು' ಎಂದು ಹಿರಿಯ ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.

ಸ್ಥಳೀಯ ಸಂಸ್ಕೃತಿ ಸಂಪದ ಮತ್ತು ರಂಗ ಸೌಗಂಧದ ಆಶ್ರಯದಲ್ಲಿ ಪಟ್ಟಣದ ಶಂಕರ ಮಠದಲ್ಲಿ ಶುಕ್ರವಾರ ನಡೆದ, ಭಾರತಿ ಹೆಗಡೆ ಅವರ 'ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಕಥಾ ಸಂಕಲನದಲ್ಲಿ ಭಾರತಿ ಹೆಗಡೆ, ವಿಲಕ್ಷಣ ವ್ಯಕ್ತಿಗಳನ್ನು ಸೃಷ್ಟಿಸಿದ್ದಾರೆ. ಸಮಾಜ ಮತ್ತು ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ’ ಎಂದರು.

ADVERTISEMENT

ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ‌ ಮಾತನಾಡಿ,' ಈ ಕಥೆಗಳು ಕೇವಲ ಸಿದ್ದಾಪುರ ಸೀಮೆಯ ಕಥೆಗಳಲ್ಲ. ಇವು ಮನುಷ್ಯರಿರುವ ಯಾವುದೇ ಲೋಕದ ಕಥೆಗಳಾಗಿವೆ' ಎಂದರು. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಕೃತಿ ಪರಿಚಯ ಮಾಡಿ,‘ಅಂಗಳದಿಂದ ಬೆಳದಿಂಗಳನ್ನು ಬೊಗಸೆಯಲ್ಲಿ ಹಿಡಿದು ಮನೆಯೊಳಗೆ ಬಂದ ಅನುಭವ ಯಾವುದೇ ಕಥೆ ಓದಿದಾಗ ಓದುಗನಿಗೆ ಆಗಬೇಕು. ಈ ಸಂಕಲನದ ಕಥೆಗಳಿಗೆ ಧ್ವನಿ ಶಕ್ತಿ ಇದೆ’ ಎಂದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.

ರಾಜೇಂದ್ರ ಕೊಳಗಿ ಪ್ರಾರ್ಥನಾ ಗೀತೆ ಹಾಡಿದರು. ಗಣಪತಿ ಹೆಗಡೆ ಹುಲೀಮನೆ ಸ್ವಾಗತಿಸಿದರು. ಲೇಖಕಿ ಭಾರತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾದ ಹೆಗಡೆ ಕೋಡನಮನೆ ನಿರೂಪಿಸಿದರು. ಗಣಪತಿ ಹೆಗಡೆ ಗುಂಜಗೋಡು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.