ADVERTISEMENT

‘ಭಟ್ಕಳ ನಗರಸಭೆ’ಗೆ ಅಂತಿಮ ಮುದ್ರೆ

ಕರಡು ಅಧಿಸೂಚನೆಗೆ ಸಲ್ಲಿಕೆಯಾಗದ ಆಕ್ಷೇಪ: ಬಹಿರಂಗ ಟೀಕೆಗೆ ಸೀಮಿತವಾದ ಬಿಜೆಪಿ

ಗಣಪತಿ ಹೆಗಡೆ
Published 22 ನವೆಂಬರ್ 2025, 2:42 IST
Last Updated 22 ನವೆಂಬರ್ 2025, 2:42 IST
ಭಟ್ಕಳ ಪಟ್ಟಣದ ಸಂಶುದ್ದಿನ್ ವೃತ್ತ
ಭಟ್ಕಳ ಪಟ್ಟಣದ ಸಂಶುದ್ದಿನ್ ವೃತ್ತ   

ಕಾರವಾರ: ಪಟ್ಟಣವಾಗಿದ್ದ ಭಟ್ಕಳವನ್ನು ‘ಸಣ್ಣ ನಗರ’ ಎಂದು ಅಧೀಕೃತವಾಗಿ ಘೋಷಿಸಿರುವ ರಾಜ್ಯ ಸರ್ಕಾರ, ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ಪ್ರದೇಶವನ್ನೊಳಗೊಂಡು 22.67 ಚದರ ಕಿ.ಮೀ ವ್ಯಾಪ್ತಿಯನ್ನು ‘ಭಟ್ಕಳ ನಗರಸಭೆ’ಯಾಗಿ ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ.

‘ಭಟ್ಕಳ ನಗರಸಭೆ ಪ್ರದೇಶಕ್ಕೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಮಾತ್ರ ಸೇರ್ಪಡೆಗೊಳಿಸುವುದಕ್ಕೆ ವಿರೋಧವಿದೆ’ ಎಂದು ಆರೋಪಿಸುತ್ತಿದ್ದ ಬಿಜೆಪಿ ನಾಯಕರು, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸದಿರುವುದು ಬಹಿರಂಗವಾಗಿದೆ. ಆ.25ರಂದು ಕರಡು ಅಧಿಸೂಚನೆ ಪ್ರಕಟಿಸಿದ್ದ ನಗರಾಭಿವೃದ್ಧಿ ಇಲಾಖೆ ಆಕ್ಷೇಪಣೆ ಸಲ್ಲಿಕೆಗೆ ಒಂದು ತಿಂಗಳ ಅವಕಾಶ ನೀಡಿತ್ತು. ಕರಡು ಅಧಿಸೂಚನೆ ವಿರುದ್ಧ ಬಹಿರಂಗ ಆಕ್ಷೇಪ ಎತ್ತಿದ್ದ ಬಿಜೆಪಿ ಸ್ಥಳೀಯ ನಾಯಕರು, ಅಧೀಕೃತ ಆಕ್ಷೇಪಣೆ ಸಲ್ಲಿಸಿರಲಿಲ್ಲ.

ಮೂರು ಸ್ಥಳೀಯ ಸಂಸ್ಥೆ ಪ್ರದೇಶವನ್ನೊಳಗೊಂಡು ಪ್ರಕಟಿಸಿದ್ದ ಕರಡು ಅಧಿಸೂಚನೆಗೆ ಆಕ್ಷೇಪಣೆ ಬರದ ಹಿನ್ನೆಲೆಯಲ್ಲಿ ಅದೇ ಅಧಿಸೂಚನೆಯಲ್ಲಿ ಸೂಚಿಸಿದ್ದ ಪ್ರದೇಶಗಳನ್ನೇ ಒಳಗೊಂಡು ಅಂತಿಮ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ನ.20ರಂದು ಹೊರಡಿಸಿದೆ.

ADVERTISEMENT

60 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಟ್ಕಳವನ್ನು ಪುರಸಭೆ ದರ್ಜೆಯಿಂದ ನಗರಸಭೆ ಮೇಲ್ದರ್ಜೆಗೇರಿಸಬೇಕು ಎಂಬ ಪ್ರಯತ್ನ 2015ರಿಂದ ನಡೆದಿತ್ತು. 2025ರ ಜ.12 ರಂದು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ‘2011ರ ಜನಗಣತಿ ಪ್ರಕಾರ ಭಟ್ಕಳದಲ್ಲಿ 32 ಸಾವಿರ, ಜಾಲಿಯಲ್ಲಿ 19 ಸಾವಿರ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಸಾವಿರದಷ್ಟು ಜನಸಂಖ್ಯೆ ಇತ್ತು. ಸದ್ಯ ಈ ಮೂರು ಪ್ರದೇಶ ಸೇರಿಸಿದರೆ 75 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಗರಸಭೆ ರಚಿಸಬೇಕು’ ಎಂದು ಒತ್ತಾಯಿಸಿದ್ದರು.

‘ಭಟ್ಕಳ ನಗರಸಭೆ ರಚನೆಗೆ ವಿರೋಧವಿಲ್ಲ. ಆದರೆ, ಪುರಸಭೆಯೊಂದಿಗೆ ಗಡಿ ಹಂಚಿಕೊಂಡಿರುವ ಶಿರಾಲಿ, ಯಲ್ವಡಿಕವೂರು, ಮಾವಿನಕುರ್ವಾ, ಮುಟ್ಟಳ್ಳಿ, ಮುಂಡಳ್ಳಿ ಪ್ರದೇಶಗಳನ್ನೂ ನಗರಸಭೆ ವ್ಯಾಪ್ತಿಗೆ ಸೇರಿಸಬೇಕು’ ಎಂದು ಬಿಜೆಪಿ ಮುಖಂಡರು ನಿರಂತರವಾಗಿ ಒತ್ತಾಯಿಸಿದ್ದರು. ಆದರೆ, ಕರಡು ಅಧಿಸೂಚನೆಯಲ್ಲಿ ಈ ಪ್ರದೇಶಗಳನ್ನು ಸೇರಿಸದ ಬಗ್ಗೆ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ.

ಭಟ್ಕಳ ‘ಸಣ್ಣ ನಗರ’ ಎಂದು ಘೊಷಣೆ 22.67 ಚದರ ಕಿ.ಮೀ ಪ್ರದೇಶ ನಗರಸಭೆ ವ್ಯಾಪ್ತಿಗೆ ಅ.25ರಂದು ಪ್ರಕಟವಾಗಿದ್ದ ಕರಡು ಅಧಿಸೂಚನೆ

ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿರುವ ಮುಟ್ಟಳ್ಳಿ ಮಾವಿನಕುರ್ವಾ ಸೇರಿದಂತೆ ಪುರಸಭೆಗೆ ಸಮೀಪದ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟಿಸಿದ್ದೆವು. ಆದರೆ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸೀಮಿತ ಪ್ರದೇಶ ಒಳಗೊಂಡು ನಗರಸಭೆ ರಚಿಸಲಾಗಿದೆ
ಶ್ರೀಕಾಂತ ನಾಯ್ಕ ಆಸರಕೇರಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ

ನಗರಸಭೆ ಗಡಿ ಗುರುತು

ಇದು ಜಾಲಿ ಗ್ರಾಮದ ಸರ್ವೆ ನಂ.251ರ ವಾಯುವ್ಯ ಮೂಲೆಯಲ್ಲಿ ಪ್ರಾರಂಭವಾಗುವ ಗಡಿಯು ವೆಂಕ್ಟಾಪುರ ಹೊಳೆ ಭಾಗ ಸೂಸಗಡಿ ಗ್ರಾಮ ಪಟ್ಟದ ಹೊಳೆ ಪುರವರ್ಗ ಹಾಗೂ ಸೊಸಗಡಿ ಗ್ರಾಮಗಳ ಗಡಿಯ ಸಂಗಮ ಸರಾಬಿಹೊಳೆ ಹೊಳೆಯ ಬಲದಂಡೆ ಭಟ್ಕಳದಿಂದ ಗೊರಟೆಗೆ ಸಂಪರ್ಕಿಸುವ ರಸ್ತೆ ಪುರವರ್ಗ ಗ್ರಾಮ ಮುಂಡಳ್ಳಿಯಿಂದ ಬರುವ ರಸ್ತೆ ಚೌಥನಿ ಗ್ರಾಮದ ಗಡಿ ಸರಾಬಿ ಹೊಳೆಯ ಎಡದಂಡೆಯ ಮೂಲಕ ಸಾಗಿ ಸೂಸಗಡಿ ಗ್ರಾಮದ ಭಾಗವನ್ನು ಒಳಗೊಂಡಿದೆ. ಅಲ್ಲಿಂದ ಜಾಲಿ ಗ್ರಾಮದ ಗಡಿ ಭಾಗ ಸೇರುತ್ತದೆ ಎಂದು ಅಂತಿಮ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.