ಭಟ್ಕಳ: ಪಟ್ಟಣದ ಹಳೇ ಮೀನು ಮಾರುಕಟ್ಟೆ ಬಳಿ ಕಸ ಎಸೆದು ಮೀನು ಮಾರುಕಟ್ಟೆ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ದ ಕ್ರಮಕ್ಕೆ ಆಗಹ್ರಿಸಿ ಮೀನುಗಾರ ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಸೆ.1ರಿಂದ ಸಂತೆ ಮಾರುಕಟ್ಟೆಯಲ್ಲಿರುವ ಹೊಸ ಮೀನು ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಕೆಲವು ಖಾಸಗಿ ವ್ಯಕ್ತಿಗಳು ಹಳೆ ಬಸ್ ನಿಲ್ದಾಣದಲ್ಲಿನ ಮೀನು ಮಾರುಕಟ್ಟೆ ಬಗ್ಗೆ ಸ್ವಚ್ಛತೆಯ ಹೆಸರಿನಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿದರು.
ಹೊಸ ಮೀನು ಮಾರುಕಟ್ಟೆಯ ಹತ್ತಿರ ನಿಂತು ಕೆಲವು ಖಾಸಗಿ ವ್ಯಕ್ತಿಗಳು ಧರ್ಮಾಧಾರಿತವಾಗಿ ಅಪಪ್ರಚಾರ ಹಾಗೂ ಪ್ರಚೋದನೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಷಯವನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದು, ಸೆ.15ರಂದು ಕೆಲವು ಕಿಡಿಗೇಡಿಗಳು ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಸ್ವಚ್ಛತೆಗೆ ಹಾಗೂ ಶಾಂತಿಗೆ ಧಕ್ಕೆ ತರುವ ಉದ್ದೇಶದಿಂದ ಕಸದ ರಾಶಿಯನ್ನು ಮೀನು ಮಾರುವ ಸ್ಥಳದಲ್ಲಿ ಹಾಕಿದ್ದಾರೆ ಎಂದು ದೂರಿದರು.
ಇಂತಹ ಕಿಡಿಗೇಡಿಗಳ ವಿರುದ್ಧ ಹಾಗೂ ಕಸದ ರಾಶಿಯ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ ಪುರಸಭೆ ಮುಖ್ಯಾಧಿಕಾರಿಗಳು, ಪೊಲೀಸ್ ಇಲಾಖೆಗೆ ಕೂಡಲೇ ದೂರು ನೀಡಿ ಪ್ರಕರಣ ದಾಖಲಿಸುವಂತೆ ಮನವಿಯಲ್ಲಿ ಆಗ್ರಹಿಸಿದರು.
ಪ್ರಮುಖರಾದ ಶ್ರೀಕಾಂತ ನಾಯ್ಕ ಆಸರಕೇರಿ, ಜಯಂತ ಬೆಣಂದೂರು ಖಾಜಾ, ಮೀನುಗಾರ ಮಹಿಳೆಯಾದ ಕಲ್ಯಾಣಿ, ಪಾರ್ವತಿ, ರೇಣುಕಾ, ರಾಮಚಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.