ADVERTISEMENT

ಭಟ್ಕಳ: ಅಂತ್ಯಸಂಸ್ಕಾರಕ್ಕೂ ಸಿಗದ ಉರುವಲು

ಖರೀದಿದಾರರ ಕೊರತೆ ನೆಪ: ಹಲವು ಉರುವಲು ಸಂಗ್ರಹಾಲಯ ಸ್ಥಗಿತ

ಮೋಹನ ನಾಯ್ಕ
Published 22 ನವೆಂಬರ್ 2025, 2:47 IST
Last Updated 22 ನವೆಂಬರ್ 2025, 2:47 IST
ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ಕಟ್ಟಿಗೆ ಡಿಪೋದಲ್ಲಿ ಕಟ್ಟಿಗೆ ಖಾಲಿಯಾಗಿರುವುದು
ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ಕಟ್ಟಿಗೆ ಡಿಪೋದಲ್ಲಿ ಕಟ್ಟಿಗೆ ಖಾಲಿಯಾಗಿರುವುದು   

ಭಟ್ಕಳ: ತಾಲ್ಲೂಕಿನ ಉರುವಲು ಸಂಗ್ರಹಾಲಯಗಳಲ್ಲಿ ಕಟ್ಟಿಗೆ ಸಂಗ್ರಹ ಖಾಲಿಯಾದ ಪರಿಣಾಮ ಶವಗಳ ಅಂತ್ಯಸಂಸ್ಕಾರಕ್ಕೆ ಉರುವಲು ಹೊಂದಿಸಲು ಪರದಾಡುವ ಸ್ಥಿತಿ ಉಂಟಾಗಿದೆ.

ತಾಲ್ಲೂಕಿನ ಸರ್ಪನಕಟ್ಟೆ, ಬಂದರು ರಸ್ತೆ ಹಾಗೂ ತೆಂಗಿನಗುಂಡಿಯಲ್ಲಿ ಉರುವಲು ಕಟ್ಟಿಗೆ ಮಾರಾಟ ಮಾಡುವ ಉರುವಲು ಸಂಗ್ರಹಾಲಯಗಳಿದ್ದವು. ಖರೀದಿದಾರರ ಸಂಖ್ಯೆ ಕಡಿಮೆ ಆಗಿದೆ ಎಂಬ ಕಾರಣ ನೀಡಿ ರಾಜ್ಯ ಅರಣ್ಯ ನಿಗಮ ಮಂಡಳಿ ಅವುಗಳನ್ನು ಸ್ಥಗಿತಗೊಳಿಸಿದೆ.

ಸದ್ಯ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕೇಂದ್ರ ಕಟ್ಟಿಗೆ ಸಂಗ್ರಹಾಲಯದಲ್ಲಿ ಮಾತ್ರ ಉರುವಲು ಕಟ್ಟಿಗೆ ಮಾರಾಟ ಮಾಡಲಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಹಾಗೂ ಗ್ರಾಮೀಣ ಪ್ರದೇಶದ ಜನರು ಅಗತ್ಯ ಇರುವ ಉರುವಲಗಳನ್ನು ಇದೇ ಸಂಗ್ರಹಾಲಯದಿಂದ ರಿಯಾಯತಿ ದರದಲ್ಲಿ ಖರೀದಿ ಮಾಡಬೇಕಿದೆ.

ADVERTISEMENT

‘ಮಳೆಗಾಲ ಹಾಗೂ ಚಳಿಗಾಲದಲ್ಲಿ ನೀರು ಕಾಯಿಸಲು ಉರುವಲುಗಳಿಗೆ ಬೇಡಿಕೆ ಹೆಚ್ಚು. ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉರುವಲು ಬೇಕಿರುವುದರಿಂದ ಪಟ್ಟಣದಲ್ಲಿರುವ ಏಕೈಕ ಸಂಗ್ರಹಾಲಯ ಅವಲಂಭಿಸಬೇಕಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ಉರುವಲು ದಾಸ್ತಾನು ಕೊರತೆ ಉಂಟಾಗಿದೆ ಎಂದು ಸಂಗ್ರಹಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ. ಅಂತ್ಯಸಂಸ್ಕಾರಕ್ಕೂ ಕಟ್ಟಿಗೆ ಸಿಗದೆ ಪರದಾಡಿದ ಘಟನೆ ನಡೆದಿವೆ’ ಎನ್ನುತ್ತಾರೆ ಸ್ಥಳೀಯ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ.

‘ತುರ್ತು ಪರಿಸ್ಥಿತಿಗಳಲ್ಲಿ ಉರುವಲು ಸಂಗ್ರಹಾಲಯದಲ್ಲಿ ಕಟ್ಟಿಗೆ ಸಿಗದಿದ್ದರೆ ಖಾಸಗಿ ಸಂಗ್ರಹಾಲಯಗಳಲ್ಲಿ ದುಬಾರಿ ದರ ತೆತ್ತು ಉರುವಲು ಖರೀದಿಸಬೇಕಾಗುತ್ತದೆ. ಬಡಕುಟುಂಬಗಳ ಜನರಿಗೆ ಇದು ಆರ್ಥಿಕ ಹೊರೆಯಾಗುತ್ತಿದೆ’ ಎನ್ನುತಾರೆ ಅವರು.

ಶಿರಾಲಿ ಡಿಪೊದಲ್ಲಿ ಕಟ್ಟಿಗೆ ಲಭ್ಯವಿದೆ. ಮರ ಕಟಾವು ಪ್ರಮಾಣ ಕಡಿಮೆ ಇರುವ ಕಾರಣ ಉರುವಲು ಸಮಸ್ಯೆ ಇದೆ. ಮರ ಕಟಾವು ಕಾರ್ಯ ನಡೆದ ನಂತರ ಉರುವಲು ಪೂರೈಸಲಾಗುವುದು
ವಿಶ್ವನಾಥ ಆರ್‌ಎಫ್‌ಒ ಭಟ್ಕಳ

ಖಾಸಗಿ ಸಂಗ್ರಹಾಲಯದಿಂದ ಖರೀದಿಸಬೇಕು’

‘ಕಳೆದೊಂದು ತಿಂಗಳಿನಿಂದ ಭಟ್ಕಳದ ಡಸಂಗ್ರಹಾಲಯದಲ್ಲಿ ಕಟ್ಟಿಗೆ ಸಿಗುತ್ತಿಲ್ಲ. ಪ್ರತಿ ಬಾರಿ ಯಾರಾದರೂ ಮೃತಪಟ್ಟಾಗ ಖಾಸಗಿ ಕಟ್ಟಿಗೆ ಸಂಗ್ರಹಾಲಯದಲ್ಲಿ ಹೆಚ್ಚುವರಿ ಹಣ ಕೊಟ್ಟು ಕಟ್ಟಿಗೆ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ರಾತ್ರಿ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ಕಟ್ಟಿಗೆ ಹೊಂದಿಸಲು ಹರಸಾಹಸ ಪಡಬೇಕಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಕಟ್ಟಿಗೆ ವ್ಯವಸ್ಥೆ ಮಾಡಲು ಕ್ರಮವಹಿಸಲ್ಲ’ ಎನ್ನುತ್ತಾರೆ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.