ADVERTISEMENT

ಭಟ್ಕಳ | ಅದ್ದೂರಿಯಾಗಿ ನಡೆದ ಹಿಂದೂ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:03 IST
Last Updated 24 ಫೆಬ್ರುವರಿ 2026, 8:03 IST
ಭಟ್ಕಳ ಮೂಡಭಟ್ಕಳದಲಿ ನಡೆದ ಹಿಂದೂ ಸಮ್ಮೇಳನವನ್ನು ಹಿಂದು ಜಾಗರಣಾ ವೇದಿಕೆಯ ಮುಖ್ಯ ವಕ್ತಾರ ಶಿವಾನಂದ ಬಡಿಗೇರ ಉದ್ಘಾಟಿಸಿದರು
ಭಟ್ಕಳ ಮೂಡಭಟ್ಕಳದಲಿ ನಡೆದ ಹಿಂದೂ ಸಮ್ಮೇಳನವನ್ನು ಹಿಂದು ಜಾಗರಣಾ ವೇದಿಕೆಯ ಮುಖ್ಯ ವಕ್ತಾರ ಶಿವಾನಂದ ಬಡಿಗೇರ ಉದ್ಘಾಟಿಸಿದರು   

ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿ ಮಂಡಲದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಮೂಡಭಟ್ಕಳದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆದ ಹಿಂದು ಸಮ್ಮೇಳನ ಅದ್ದೂರಿಯಾಗಿ ನಡೆಯಿತು.

ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಹಿಂದು ಜಾಗರಣಾ ವೇದಿಕೆಯ ಮುಖ್ಯ ವಕ್ತಾರ ಶಿವಾನಂದ ಬಡಿಗೇರ ಮಾತನಾಡಿ, ‘ಪಂಚ ಪರಿವರ್ತನೆ ಉದ್ದೇಶದೊಂದಿಗೆ ಧರ್ಮ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಕುಟುಂಬ ಪ್ರಬೋಧನೆ ಅಗತ್ಯ. ಸ್ವದೇಶಿ ಜೀವನ ಶೈಲಿ ಅಳವಡಿಸಿಕೊಂಡು ಭಾರತೀಯ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು’ ಎಂದು ಹೇಳಿದರು.

ಈ ಕಾರ್ಯಕ್ರಮ ಯಾವುದೇ ಜಾತಿ–ಮತ ವಿರೋಧಿಯಲ್ಲ; ಹಿಂದು ಧರ್ಮದ ಒಗ್ಗಟ್ಟು ಮೂಡಿಸುವ ವೇದಿಕೆ. ಯುವಪೀಳಿಗೆ ಸಂಸ್ಕೃತಿಯಿಂದ ದೂರವಾಗದಂತೆ ಪಾಲಕರು ಎಚ್ಚರಿಕೆಯಿಂದಿರಬೇಕು. ಇತಿಹಾಸದ ಮಹನೀಯರ ಕಥೆಗಳನ್ನು ಮಕ್ಕಳಿಗೆ ತಿಳಿಸಬೇಕು. ದೇಶದಲ್ಲಿ ಎಲ್ಲ ಧರ್ಮದವರು ಸೌಹಾರ್ದದಿಂದ ಬದುಕಬೇಕು ಎಂದರು.

ADVERTISEMENT

ಸಮ್ಮೇಳನ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೂರು ವರ್ಷಗಳ ಪರಂಪರೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವೆಯನ್ನು ಸ್ಮರಿಸಿದರು. 1970ರಲ್ಲಿ ಇದೇ ಸ್ಥಳದಲ್ಲಿ ಶಾಖೆ ಆರಂಭಗೊಂಡಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಭಟ್ಕಳ ರೈಲ್ವೆ ನಿಲ್ದಾಣ ಸಮೀಪದ ಶ್ರೀ ನಾಗಮಾಸ್ತಿ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ಹೊರಟು, ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ಮಾರ್ಗವಾಗಿ ಮೂಡಭಟ್ಕಳ ಬೈಪಾಸ್ ಮೂಲಕ ಸಭಾ ಸ್ಥಳಕ್ಕೆ ತಲುಪಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.