
ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ರಸ್ತೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯದ ತ್ಯಾಜ್ಯ ನೀರು ಕಳೆದ ಒಂದು ವಾರದಿಂದ ರಸ್ತೆ ಮೇಲೆ ಹರಿಯುತ್ತಿದೆ. ಪುರಸಭೆ ಕ್ರಮ ವಹಿಸದೇ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಈ ಮಾರ್ಗದಲ್ಲಿ ತಾಲ್ಲೂಕು ಆಸ್ಪತ್ರೆ, ಆನಂದ ಆಶ್ರಮ ಶಾಲೆ, ಹಿಂದೂ ವರ್ಗಗಳ ವಸತಿ ನಿಲಯ ಇವೆ.
‘ತಾಲ್ಲೂಕು ಆಸ್ಪತ್ರೆಯ ರಸ್ತೆಯಲ್ಲಿ ನಿರ್ಮಾಣವಾದ ಹೊಸ ಅಲ್ಪಸಂಖ್ಯಾತ ವಸತಿ ನಿಲಯ ಕಟ್ಟಡಕ್ಕೆ ಒಳಚರಂಡಿ ಸಂಪರ್ಕ ನೀಡುವಂತೆ 2022ರಿಂದ ಪುರಸಭೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ವಸತಿ ನಿಲಯದ ವರೆಗೆ ಯುಜಿಡಿ ಸಂಪರ್ಕವಿರದ ಕಾರಣ ಈ ಸಮಸ್ಯೆ ಎದುರಾಗಿದೆ’ ಎಂಬುದು ಅಧಿಕಾರಿಯೊಬ್ಬರು ಹೇಳಿದರು.
‘ವಸತಿ ನಿಲಯದ ದುಸ್ಥಿತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆಗೆ ಸೂಚಿಸಿದ್ದರೂ ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಾಲ್ಲೂಕಾಧಿಕಾರಿ ಶಂಸುದ್ದೀನ್ ಪ್ರತಿಕ್ರಿಯಿಸಿದರು.
‘ಪುರಸಭೆಯಿಂದ ಪರ್ಯಾಯ ಯುಜಿಡಿ ಸಂಪರ್ಕ ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಲಾಗಿದ್ದು, ಅನುದಾನ ಕೊರತೆಯಿಂದ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವಡ ತಿಳಿಸಿದರು.
ಸ್ಥಳಕ್ಕೆ ಗುರುವಾರ ಉಪವಿಭಾಗಾಧಿಕಾರಿ ಕೆ.ಕಾವ್ಯರಾಣಿ, ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಸಮಸ್ಯೆ ಪರಿಹಾರಕ್ಕೆ ಕ್ರಮವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.