ADVERTISEMENT

ಜಾಲಿ|ಆರಂಭಗೊಳ್ಳದ ಇಂದಿರಾ ಕ್ಯಾಂಟೀನ್: ಕಾರ್ಮಿಕರ ಕೈಗೆಟುಕದ ಕಡಿಮೆ ದರದ ಊಟ,ಉಪಹಾರ

ಮೋಹನ ನಾಯ್ಕ
Published 12 ಅಕ್ಟೋಬರ್ 2025, 6:44 IST
Last Updated 12 ಅಕ್ಟೋಬರ್ 2025, 6:44 IST
ಭಟ್ಕಳ ತಾಲ್ಲೂಕಿನ ಜಾಲಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್
ಭಟ್ಕಳ ತಾಲ್ಲೂಕಿನ ಜಾಲಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್   

ಭಟ್ಕಳ: ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸಲು ಜಾಲಿ ಪಟ್ಟಣ ಪಂಚಾಯಿತಿ ವತಿಯಿಂದ ಜಾಲಿ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಇಂದಿರಾ ಕ್ಯಾಂಟೀನ್‌ ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಜಾಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದ ಮೇಲೆ ಅಲ್ಲಿನ ಲೈಫ್‌ಕೇರ್‌ ಆಸ್ಪತ್ರೆಯ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್‌‍ನ ಕಟ್ಟಡ ಕಾಮಗಾರಿಯನ್ನು ಕೆಲ ತಿಂಗಳ ಹಿಂದೆ ಪೂರ್ಣಗೊಳಿಸಲಾಗಿದೆ. ಆದರೆ, ಕಟ್ಟಡ ಕಾಮಗಾರಿ ಪೂರ್ಣಭಗೊಂಡರೂ ಕ್ಯಾಂಟೀನ್ ಆರಂಭಕ್ಕೆ ಜಾಲಿ ಪಟ್ಟಣ ಪಂಚಾಯಿತಿ ಮುಂದಾಗಿಲ್ಲ ಎಂಬುದು ಜನರ ದೂರು.‌

‘ಕ್ಯಾಂಟೀನ್ ಆವರಣ ವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡ ನಿರ್ಮಾಣಗೊಂಡರೂ ಉಪಹಾರ, ಊಟ ವಿತರಣೆ ಆರಂಭಿಸಲು ಮುಂದಾಗುತ್ತಿಲ್ಲ. ಜಿಲ್ಲೆಯ ಉಳಿದೆಡೆ ಕ್ಯಾಂಟೀನ್ ಸೇವೆ ಆರಂಭಗೊಂಡಿದ್ದರೂ ಜಾಲಿಯಲ್ಲಿ ಮಾತ್ರ ಸಿಗುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ದೂರಿದರು.

ADVERTISEMENT

‘ಜಾಲಿ ಸುತ್ತಮುತ್ತಲೂ ಕಟ್ಟಡ ಕಾಮಗಾರಿಗೆ ತೆರಳುವ ನೂರಾರು ಕೂಲಿ ಕಾರ್ಮಿಕರಿದ್ದಾರೆ. ಸಮೀಪದಲ್ಲೇ ಆಸ್ಪತ್ರೆಯೂ ಇದ್ದು ಅಲ್ಲಿ ದುಡಿಯುವ ಕಾರ್ಮಿಕರಿಗೆ, ಬಡ ರೋಗಿಗಳ ಕುಟುಂದವರಿಗೆ ಕೂಲಿ ಕಾರ್ಮಿಕರಿಗೆ ನೆರವಾಗಲಿದೆ. ಪದವಿ ಕಾಲೇಜು, ಐಟಿಐ ಕಾಲೇಜು ಕೂಡ ಹತ್ತಿರದಲ್ಲಿದ್ದು, ನೂರಾರು ವಿದ್ಯಾರ್ಥಿಗಳು ಕಡಿಮೆ ದರದಲ್ಲಿ ಊಟೋಪಚಾರ ಪಡೆಯಲು ಅನುಕೂಲವಾಗುತ್ತದೆ. ಆದರೆ, ಕ್ಯಾಂಟೀನ್ ನಿರ್ಮಿಸಿಯೂ ಅದರ ಸೇವೆ ಸಿಗುತ್ತಿಲ್ಲ’ ಎಂಬುದು ಸ್ಥಳೀಯರ ದೂರು.

ಇಂದಿರಾ ಕ್ಯಾಂಟೀನ್‌ ಸುತ್ತಮುತ್ತ ಇಂಟರ್‌ಲಾಕ್‌ ಸೀಟ್‌ ಅಳವಡಿಕೆ ಕಾಮಗಾರಿಗೆ ಟೆಂಡರ್‌ ನೀಡಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಆರಂಭಿಸಲಾಗುವುದು
ಮಂಜಪ್ಪ ಎನ್.‌ ಜಾಲಿ ಪ.ಪಂ ಮುಖ್ಯಾಧಿಕಾರಿ
ಕುಸಿಯುತ್ತಿರುವ ಗುಣಮಟ್ಟ: ಆರೋಪ
ಭಟ್ಕಳ ಪಟ್ಟಣದ ಸಂತೆ ಮಾರುಕಟ್ಟೆ ರಸ್ತೆಯ ಬಳಿಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಈಚಿನ ದಿನಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ‘ಕೆಲವೊಮ್ಮೆ ಇಲ್ಲಿ ತಯಾರಿಸುವ ಆಹಾರಗಳು ಗುಣಮಟ್ಟದಿಂದ ಕೂಡಿರುತ್ತಿಲ್ಲ. ಗುಣಮಟ್ಟದ ಆಹಾರ ಒದಗಿಸುತ್ತಾರೆಯೇ ಎನ್ನುವ ಬಗ್ಗೆ ಕಾಲಕಾಲಕ್ಕೆ ಪುರಸಭೆ ಅಧಿಕಾರಿಗಳು ಬಂದು ತಪಾಸಣೆ ಮಾಡಬೇಕು’ ಎನ್ನುವುದು ಅವರ ಆಗ್ರಹ. ‘ಪ್ರತಿನಿತ್ಯ ಇಲ್ಲಿ 250ಕ್ಕೂ ಹೆಚ್ಚು ಊಟ ವಿತರಣೆ ಮಾಡಲಾಗುತ್ತಿದೆ. ಕೂಲಿಕಾರ್ಮಿಕರು, ನಿರ್ಗತಿಕರು ಮಾತ್ರವಲ್ಲದೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಊಟ ಸವಿದು ಹೋಗುತ್ತಾರೆ’ ಎನ್ನುತ್ತಾರೆ ಕ್ಯಾಂಟೀನ್ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.