ADVERTISEMENT

ಭಟ್ಕಳ | 'ದೇಶ ಭಕ್ತರ ನಡುವೆ ದೇಶದ್ರೋಹಿಗಳಿದ್ದಾರೆ'

ಅದಮಾರು ಮಠದ ಪೀಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಮೇ 2025, 13:56 IST
Last Updated 11 ಮೇ 2025, 13:56 IST
ಮಣ್ಕುಳಿಯ ಹನುಮಂತ ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಠಮಠದ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು
ಮಣ್ಕುಳಿಯ ಹನುಮಂತ ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಠಮಠದ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು   

ಭಟ್ಕಳ: ‘ದೇಶ ಭಕ್ತರ ನಡುವೆಯೇ ರಾಷ್ಟ್ರದ್ರೋಹಿಗಳೂ ಇರುತ್ತಾರೆ. ಹೊರಗಿನ ದ್ರೋಹಿಗಳನ್ನು ನಿಗ್ರಹಿಸಬಹುದು ಆದರೆ ನಮ್ಮಲ್ಲಿಯೇ ಇರುವ ದ್ರೋಹಿಗಳನ್ನು ನಿಗ್ರಹಿಸುವುದು ಕಷ್ಟದ ಕೆಲಸ’ ಎಂದು ಅಷ್ಠಮಠಗಳಲ್ಲೊಂದಾದ ಅದಮಾರು ಮಠದ ಪೀಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಮಣಕುಳಿಯಲ್ಲಿನ ಹನುಮಂತ ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾನ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂತಿಮ ದಿನವಾದ ಭಾನುವಾರ ಬ್ರಹ್ಮ ಕಲಶೋತ್ಸವ ನೆರವೇರಿಸಿ ಆಶೀರ್ವಚನ ನೀಡಿದರು.

‘ಹಿಂದೂಗಳು ಎಂದೂ ಆಕ್ರಮಣ ಮಾಡಿದ ಉದಾಹರಣೆಯಿಲ್ಲ, ಆದರೆ ನಮ್ಮ ಮೇಲೆ ಆಕ್ರಮಣ ಮಾಡಲು ಬಂದವರಿಗೆ ತಕ್ಕ ಶಾಸ್ತಿ ಮಾಡಲು ನಮಗೆ ಹನುಮಂತನೇ ಉದಾಹಣೆಯಾಗಿದ್ದಾನೆ. ನಾವೆಂದೂ ಅವರನ್ನು ತಟ್ಟದೇ ಬಿಟ್ಟಿಲ್ಲ ಎಂದು ಹೇಳಿದರು.

ADVERTISEMENT

‘ತರುಣ ಜನಾಂಗ ಸನಾತನ ಧರ್ಮ, ಹಿಂದೂ ಸಮುದಾಯ, ಸಂಸ್ಕೃತಿಯ ರಕ್ಷಣೆಗಾಗಿ ಪಣತೊಡಬೇಕಾಗಿದೆ’ ಎಂದರು.

ಮಾಜಿ ಶಾಸಕ ಸುನಿಲ್ ನಾಯ್ಕ, ‘ಮಣ್ಕುಳಿಯು ಉತ್ತರ ಕನ್ನಡ ಜಿಲ್ಲೆಯ ಹೆಬ್ಬಾಗಿಲು. ದೇವಾಲಯದ ಎದುರು ಬೃಹತ್ ಹನುಮಂತನ ಮೂರ್ತಿ ಸ್ಥಾಪಿಸುವ ಮೂಲಕ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಷ ಶೆಟ್ಟಿ ಅವರು ಉತ್ತಮ ಕಾರ್ಯ ಮಾಡಿದ್ದಾರೆ’ ಎಂದರು.

ಕುಮಟಾದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ‘ಸದಾ ಶಾಂತಿ, ತಾಳ್ಮೆ ಬೆಳೆಸಿಕೊಂಡು ಸಂಘಟಿತರಾಗಿದ್ದರೆ ಎಂತಹ ಕಾರ್ಯ ಕೂಡಾ ಮಾಡಬಹುದು’ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಕಾರ ಇಲಾಖೆಯ ಶಿವಮೊಗ್ಗದ ಉಪ ನಿಬಂಧಕ ನಾಗಭೂಷಣ ಕಲ್ಮನೆ, ಡಾ. ಕೃಷ್ಣಾನಂದ ಶೆಟ್ಟಿ ಉಡುಪಿ, ಡಾ. ಶರತ್ ಬಾಳೆಮನೆ ಮಂಗಳೂರು, ವಿ.ಹಿ.ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶಂಕರ ಎಂ.ಶೆಟ್ಟಿ, ಹಿಂದೂಸ್ಥಾನ್ ಪೆಟ್ರೋಲಿಯಂ ನಿವೃತ್ತ ಜನರಲ್ ಮೆನೇಜರ್ ಚಂದ್ರಹಾಸ ಶಿರಾಲಿ, ಹೊನ್ನಾವರ ಗಾಣಿಗ ಸಮಾಜದ ಅಧ್ಯಕ್ಷ ಎಸ್.ಕೆ. ಶೆಟ್ಟಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.